ದಾಬಸ್‍ಪೇಟೆ: ಪ್ರತಿ ಮನುಷ್ಯನಿಗೂ ಒಂದು ಗೊತ್ತಿದೆ ಮತ್ತೊಂದು ಗೊತ್ತಿಲ್ಲ, ಸಾವು ನಿಶ್ಚಿತವಾಗಿ ಗೊತ್ತಿದೆ, ಆದರೆ ಯಾವಾಗ, ಎಲ್ಲಿ ಎಂದು ಮಾತ್ರ ಗೊತ್ತಿಲ್ಲ, ಆದ್ದರಿಂದ ನಾವು ಇರುವಷ್ಟು ದಿನ ತನ್ನ ಇರುವಿಕೆಯ ಗುರುತನ್ನು ಸಮಾಜ ಗುರುತಿಸುವಂತಾಗಬೇಕು ಎಂದು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಸ್‌ಆರ್ ಗ್ರೂಪ್ಸ್ ಮಾಲೀಕ ಅಂಚೆಮನೆ ರುದ್ರಯ್ಯ ಸ್ಮರಣಾರ್ಥ ಏರ್ಪಡಿಸಿದ್ದ ಶರಣಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶೇಷವಾಗಿ ವೀರಶೈವ ಲಿಂಗಾಯತ ಸಮಾಜದಲ್ಲಿ ಲಿಂಗೈಕ್ಯರಾದ ಶರಣರನ್ನು ಭಕ್ತಿಪೂರ್ವಕವಾಗಿ ಸ್ಮರಿಸುವುದು ಮತ್ತು ಅವರ ತತ್ತ್ವಗಳನ್ನು ನೆನೆಯುವುದು ಶರಣ ಪರಂಪರೆಯಲ್ಲಿ ಅತ್ಯಂತ ಪವಿತ್ರ ಆಚರಣೆಯಾಗಿದೆ. ಅದನ್ನು ಶರಣಮೇಳವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಸಿದ್ಧಗಂಗಾ ಮಠದ ಶಕ್ತಿಯ ಆಧಾರಸ್ತಂಭವಾಗಿದ್ದ ಉದ್ದಾನ ಶಿವಯೋಗಿಗಳ ಅಣ್ಣನವರ ಮುಮ್ಮೊಗ ಎಸ್.ರುದ್ರಯ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಸಿದ್ದಗಂಗಾ ಮಠಕ್ಕೂ ಹಾಗೂ ರುದ್ರಯ್ಯನವರಿಗೂ ತಾಯಿ-ಮಗನ ಸಂಬಂಧಕ್ಕಿಂತ ಹೆಚ್ಚು. ಅವರ ಮೂವರು ಮಕ್ಕಳು ಸಹ ರುದ್ರಯ್ಯನವರ ಹಾದಿಯಲ್ಲಿ ನಡೆಯುತ್ತಿರುವುದು ಅವರ ಕುಟುಂಬದ ಘನತೆಯನ್ನು ಹೆಚ್ಚಿಸಿದೆ ಎಂದರು.

ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಮಾತನಾಡಿ, ಜೀವನದಲ್ಲಿ ಎರಡು ವೃತ್ತಿ ಪವಿತ್ರವಾದವು. ಅದರಲ್ಲಿ ಶಿಕ್ಷಣ ಮತ್ತು ವೈದ್ಯ ಕ್ಷೇತ್ರಗಳು, ಆಸ್ಪತ್ರೆ ಹಾಗೂ ಶಾಲೆ ತೆರೆಯುವುದರ ಮೂಲಕ ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ಸಲ್ಲಿಸಿರುವುದನ್ನು ಯಾರೂ ಮರೆಯುವಂತಿಲ್ಲ, ಅಂತಹ ಸ್ನೇಹಜೀವಿಯನ್ನು ಕಳೆದುಕೊಂಡಿರುವುದರಿಂದ ಅವರ ಕುಟುಂಬಕ್ಕೆ ಹಾಗು ಆಪಾರ ಅಭಿಮಾನಿಗಳಿಗೆ ನಷ್ಟವಾಗಿದೆ. ಅವರು ಯಾವತ್ತೂ ಪ್ರಶಸ್ತಿ ಅರಸಿ ಹೋದವರಲ್ಲ, ಆದರ್ಶ ವ್ಯಕ್ತಿಯಾಗಿ ಉತ್ತಮ ಗೃಹಸ್ಥರಾಗಿ ಜೀವನ ನಡೆಸಿ ಮಾದರಿ ವ್ಯಕ್ತಿಯಾಗಿ ಬಾಳಿದವರು ಸ್ನೇಹ ಜೀವಿಯಾಗಿದ್ದು ಎಲ್ಲರನ್ನು ಆತ್ಮೀಯತೆಯಿಂದ ಕಾಣುತ್ತಿದ್ದರು ಎಂದು ರುದ್ರಪ್ಪನವರ ಸೇವೆಯನ್ನು ಸ್ಮರಿಸಿದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಅಂಚೆಮನೆ ರುದ್ರಪ್ಪನವರ ನನಗೆ ತಂದೆಯ ಸ್ಥಾನದಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದರು. ಅವರ ಸಾಧನೆ ತಮ್ಮ ಯಶಸ್ಸಿಗೆ ಮಾತ್ರ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವರ ಪರಿಶ್ರಮ, ತ್ಯಾಗ ಮತ್ತು ಸೇವಾಭಾವ ಪ್ರತಿಯೊಬ್ಬರಿಗೂ ಅನುಕರಣೀಯ. ಇಂತಹ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಸೋಂಪುರದ ಶ್ರೀ ಸೋಮೇಶ್ವರ ದೇವಾಲಯ ನಿರ್ಮಾಣ, ಎತ್ತಿನಹೊಳೆ ಯೋಜನೆಯಡಿ ನೀರನ್ನು ನಮ್ಮ ಭಾಗಕ್ಕೂ ಹರಿಸಲು ನಡೆದ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಖಾನಿಮಠದ ಶ್ರೀ ಬಸವರಾಜು ಸ್ವಾಮೀಜಿ, ಹೊನ್ನಮ್ಮಗವಿ ಮಠದ ರುದ್ರಮುನಿ ಸ್ವಾಮೀಜಿ, ಮಾಜಿ ಶಾಸಕ ವೀರಭದ್ರಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ಗಂಗಾಧರೇಶ್ವರ ಸ್ವಾಮಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಉಪಸ್ಥಿತರಿದ್ದರು.


ಪೋಟೋ 6 :

ದಾಬಸ್‍ಪೇಟೆಯ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಸ್‌ಆರ್‌ ಗ್ರೂಪ್ಸ್ ಮಾಲೀಕ ಅಂಚೆಮನೆ ರುದ್ರಯ್ಯ ಸ್ಮರಣಾರ್ಥ ಏರ್ಪಡಿಸಿದ್ದ ಶರಣಮೇಳದಲ್ಲಿ ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.