ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ವರ್ತಮಾನದ ತಲ್ಲಣ ಮತ್ತು ಬೇಗುದಿಯ ವಿಲಕ್ಷಣ ಘಟನೆಗಳು ಸಮಾಜವನ್ನು ಬಾದಿಸುತ್ತಿವೆ. ಬದುಕಿನ ಕನಸು ಕಾಣುವ ಶೋಷಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ನೋವು ಅನುಭವಿಸುತ್ತಿರುವ ಶೋಷಿತ ವರ್ಗಗಳ ಪರ ಪ್ರಜ್ಞಾವಂತ ವರ್ಗ ಮೌನ ವಹಿಸದೆ ಧ್ವನಿ ಮಾಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.ಗುಲ್ಬರ್ಗಾ ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಿದ್ದಲಿಂಗೇಶ್ವರ ಪ್ರಕಾಶನ, ಬೆಂಗಳೂರಿನ ಅನ್ನಪೂರ್ಣ ಪ್ರಕಾಶನ ಆಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಪ್ರೊ. ಎಚ್.ಟಿ ಪೋತೆ ಸಂಪಾದಿಸಿದ ‘ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತುಕತೆ’ ಹಾಗೂ ಡಾ. ಪಿ. ನಾಗರಾಜ ಸಂಪಾದಿಸಿದ ‘ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ’ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ರೈತರು, ಶೋಷಿತರು, ದಮನಿತರು ಹಾಗೂ ಮಹಿಳೆಯರು ನಿರ್ಭಯವಾಗಿ ಬದುಕು ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಸು ಕಾಣುವ ದುರ್ಬಲರು ಏನನ್ನೂ ಗಳಿಸದೆ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಸಿಲುಕಿದ್ದಾರೆ. ರಾಜಕೀಯ ಬಿಕ್ಕಟ್ಟು ಮತ್ತು ಸಾಂಸ್ಕೃತಿಕ ಸಂಘರ್ಷಗಳ ನಡುವೆ ವಿಚಾರವಂತರ ಮೌನವೇಕೆ? ಎಂದು ಪ್ರಶ್ನಿಸಿದರು.ತಳ ಸಮುದಾಯಗಳ ರಕ್ಷಣೆಗೆ ಕಾನೂನುಗಳಿದ್ದರು ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ರಾಜಕೀಯವನ್ನು ದುರ್ಬಳಕೆ ಮಾಡಿಕೊಂಡು ಉದ್ಯಮ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈತರು, ಕೃಷಿಕರು ಮತ್ತು ಮಹಿಳೆಯರು ಬಗ್ಗೆ ಪ್ರಜ್ಞಾವಂತಿಕೆ ತೊರದಿದ್ದರೆ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು? ಎಂದೂ ರಾಮೇಗೌಡರು ಪ್ರಶ್ನಿಸಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ಪಿ.ನಾಗರಾಜ ಮಾತನಾಡಿ, ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ ಕೃತಿಯಲ್ಲಿ ಜೀವಪರ ಮತ್ತು ಜೀವನ ಪ್ರಿಯ ಕಥೆಗಳಿವೆ. ದಲಿತ ಸಂವೇದನೆ ಚಿಂತನೆಯನ್ನು ಪ್ರತಿ ಕಥೆಯು ಒತ್ತಿ ಹೇಳುತ್ತವೆ. ಶೋಷಿತರು ಮತ್ತು ದಮನಿತರ ವರ್ತಮಾನದ ಬದುಕನ್ನು ಕಥೆಗಳಲ್ಲಿ ಟಡಗಿದೆ. ದಲಿತರ ಜೀವನ ತಲ್ಲಣ ಮತ್ತು ಸಂಗತಿಗಳನ್ನು ಬಿಂಬಿಸುತ್ತವೆ ಎಂದರು.ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಒಂದು ಕೃತಿಗೆ ಪ್ರತಿಕ್ರಿಯೆಗಳು ಬಂದಾಗ ಅತ್ಯುತ್ತಮ ಕೃತಿ ರೂಪ ಪಡೆಯುತ್ತದೆ. ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು ಡಾ. ಮಲ್ಲಿಕಾರ್ಜನ ಖರ್ಗೆಯವರ ಜೀವನದ ಮೇಲೆ ಪ್ರಭಾವ ಬೀರಿವೆ. ರಾಜಕೀಯ 40 ದಶಕಗಳ ಅವರ ರಾಜಕೀಯ ಜೀವನದಲ್ಲಿ ಶೋಷಿತರ, ತಳಸಮುದಾಯ ಮತ್ತು ಮಹಿಳೆಯರ ಬದುಕಿನ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು. ಸಿದ್ದಲಿಂಗೇಶ್ವರ ಪ್ರಕಾಶನದ ಸಿದ್ದಲಿಂಗ ಕೊನೇಕ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆವಹಿಸಿ ಮಾತನಾಡಿದರು. ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‍ನ ಸುರೇಶ್ ಉಪಸ್ಥಿತರಿದ್ದರು. ಡಾ. ಪ್ರಕಾಶ್ ಸಂಗಮ ಸ್ವಾಗತಿಸಿದರು. ಡಾ. ಪ್ರೇಮಾ ಅಪಚಂದ ನಿರೂಪಿಸಿದರು. ಡಾ. ಶಿವಲೀಲಾ ವಂದಿಸಿದರು.