ಪತ್ರಕರ್ತ ಮಾನವೀಯ ಸಂಬಂಧ ಬೆಸೆಯುವ ನೇಕಾರನಾಗಲಿ: ಪ್ರಭಾಕರ

| Published : Jul 07 2025, 11:48 PM IST

ಪತ್ರಕರ್ತ ಮಾನವೀಯ ಸಂಬಂಧ ಬೆಸೆಯುವ ನೇಕಾರನಾಗಲಿ: ಪ್ರಭಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನೈಜ ವರದಿಗಳು ಮರೆಯಾಗುತ್ತಿದ್ದು, ಊಹಾಪೋಹದ ಸುದ್ದಿಗಳೇ ಹೆಚ್ಚು ಮುನ್ನಲೆಗೆ ಬರುತ್ತಿವೆ.

ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಮಾಧ್ಯಮ ಸಲಹೆಗಾರ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನೈಜ ವರದಿಗಳು ಮರೆಯಾಗುತ್ತಿದ್ದು, ಊಹಾಪೋಹದ ಸುದ್ದಿಗಳೇ ಹೆಚ್ಚು ಮುನ್ನಲೆಗೆ ಬರುತ್ತಿವೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಗಾಂಧಿಭವನದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪತ್ರಕರ್ತ ಮಾನವೀಯ ಸಂಬಂಧಗಳನ್ನು ಬೆಸೆಯುವ ನೇಕಾರನಾಗಬೇಕು. ಪತ್ರಿಕೋದ್ಯಮದ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬಾರದು. ಯುಟ್ಯೂಬ್ ಚಾನೆಲ್‌ಗಳು ಹಾಗೂ ಬೇರೆ ಬೇರೆ ಉದ್ದೇಶಗಳಿಗೆ ಪತ್ರಕರ್ತನಾಗಿ ಬರುವವರ ಹಾವಳಿ ಹೆಚ್ಚಾಗುತ್ತಿರುವುದರಿಂದ ನೈಜ ವರದಿ ನೀಡುವ ಪತ್ರಕರ್ತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪತ್ರಿಕೋದ್ಯಮ ಆಶಯವನ್ನು ಜೀವಂತವಾಗಿರಿಸಿಕೊಂಡು ಬದುಕುತ್ತಿರುವ ಪತ್ರಕರ್ತರು ಸಹ ದೊಡ್ಡಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ಪಾಡಿಗೆ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕೆಲವರು ಮಾಧ್ಯಮ ಆಶಯಗಳಿಗೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕಾಯ್ದೆ ತರುವ ಸಂಬಂಧ ಬರುವ ಅಧಿವೇಶನದಲ್ಲಿ ಚರ್ಚೆಯಾಗಿ, ಸೂಕ್ತ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.ಮುದ್ರಣ ಮಾಧ್ಯಮ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಅನೇಕ ಸವಾಲುಗಳ ನಡುವೆ ಪತ್ರಿಕೆಗಳನ್ನು ಹೊರ ತರುವ ಸಮಸ್ಯೆಯನ್ನು ಪತ್ರಿಕಾ ಸಂಸ್ಥೆಗಳು ಎದುರಿಸುತ್ತಿವೆ. ಪತ್ರಕರ್ತರ ಹಿತ ಕಾಯುವ ನೆಲೆಯಲ್ಲಿ ಕರ್ನಾಟಕ ಸರ್ಕಾರ ಅನೇಕ ಪತ್ರಿಕಾಸ್ನೇಹಿ ಕ್ರಮ ಕೈಗೊಂಡಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್‌ ಹಾಗೂ ಪತ್ರಕರ್ತರ ಆರೋಗ್ಯ ರಕ್ಷಣೆಗೆ 5 ಲಕ್ಷ ರು.ವರೆಗೆ ನಗದು ರಹಿತ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೊಳ್ಳುತ್ತಿದೆ. ಪತ್ರಕರ್ತರಿಗೆ ನಿವೇಶನ ನೀಡುವ ಸಂಬಂಧ ಅಗತ್ಯ ಕ್ರಮ ವಹಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೆ, ಪತ್ರಿಕೋದ್ಯಮ ಆಶಯಗಳನ್ನು ಘಾಸಿಗೊಳಿಸುವ ಹಾಗೂ ವೃತ್ತಿಬದ್ಧತೆ ಇಲ್ಲದೆ ವರ್ತಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪವಿತ್ರ ವೃತ್ತಿಗೆ ಅಡ್ಡಿಯಾಗಿದೆ. ವೃತ್ತಿ ಅಗೌರವ ತರುವವರನ್ನು ಸಮಾಜವೇ ದೂರ ಇಡಬೇಕು ಎಂದು ಹೇಳಿದರು. ಇದೇ ವೇಳೆ ಪತ್ರಕರ್ತರಿಗೆ ಅಗತ್ಯ ಸೌಕರ್ಯಗಳನ್ನು ನೀಡಲು ಶ್ರಮಿಸುತ್ತಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ ಅವರನ್ನು ಸನ್ಮಾನಿಸಲಾಯಿತು.

ದಾವಣೆಗೆರೆ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳು ಕುರಿತು ಉಪನ್ಯಾಸ ನೀಡಿದರು. ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತರಾದ ಶಶಿಧರ ಮೇಟಿ, ಕೆ.ಎಂ. ಮಂಜುನಾಥ, ನರಸಿಂಹಮೂರ್ತಿ ಕುಲಕರ್ಣಿ, ವೆಂಕೋಬಿ ಸಂಗನಕಲ್ಲು ಹಾಗೂ ಕೆ.ಮಲ್ಲಯ್ಯ ಮೋಕಾ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಜರುಗಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಟ್ರೋಫಿಗಳನ್ನು ನೀಡಲಾಯಿತು. ಹಿರಿಯ ಪತ್ರಕರ್ತರಾದ ಮತ್ತಿಹಳ್ಳಿ ಅಹಿರಾಜ್, ಬಸವರಾಜ ಹರನಹಳ್ಳಿ, ಹರಿಶಂಕರ್, ನಾಗರಾಜ್ ಎಸ್., ಪ್ರಭಾಕರ್, ತಿಮ್ಮಪ್ಪ ಚೌದರಿ, ನರಸನಗೌಡ, ಮಾರುತಿ ಸುಣಗಾರ, ಗುರುಶಾಂತ್, ವಿಜಯನಗರ ಜಿಲ್ಲೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಲಕ್ಷ್ಮಣ ಹಾಗೂ ವಿವಿಧ ತಾಲೂಕುಗಳ ಪತ್ರಕರ್ತರು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.