ಪತ್ರಕರ್ತ ಈ ನೆಲದ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಲಿ: ಡಾ. ವಿನಯಾ ಒಕ್ಕುಂದ

| Published : Jul 07 2025, 12:17 AM IST

ಸಾರಾಂಶ

ದಾಂಡೇಲಿಯ ಡಿಲಕ್ಸ್‌ ಸಭಾಂಗಣದಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಶ್ರಮಜೀವಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.

ದಾಂಡೇಲಿ: ಒಂದು ದೇಶದ ಶಾಂತಿ, ಸೌಹಾರ್ದತೆ ಕೂಡಾ ಮಾಧ್ಯಮದ ಸುದ್ದಿಗಳನ್ನು ಅವಲಂಬಿಸಿರುತ್ತವೆ. ಎಲ್ಲ ಜಾತಿ ಧರ್ಮ, ಭಾಷೆಗಳನ್ನೊಳಗೊಂಡು ಮಿನಿ ಇಂಡಿಯಾದಂತಿರುವ ದಾಂಡೇಲಿಯ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಲು ಇಲ್ಲಿಯ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಲೇಖಕಿ, ದಾಂಡೇಲಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿನಯಾ ಒಕ್ಕುಂದ ನುಡಿದರು.

ಇಲ್ಲಿಯ ಡಿಲಕ್ಸ್‌ ಸಭಾಂಗಣದಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘ (ದಾಂಡೇಲಿ ಪ್ರೆಸ್ ಕ್ಲಬ್) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರಮಜೀವಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಎಂದರೆ ಅದು ವೃತ್ತಿಯಷ್ಟೇ ಅಲ್ಲ. ಪತ್ರಕರ್ತ ಸಮಾಜದ ಅಂತಃಸಾಕ್ಷಿ ಕೂಡಾ ಆಗಿರುತ್ತಾನೆ. ಬಂಡವಾಳವಾದಿ ಕಾಲಘಟ್ಟದಲ್ಲಿ ಪತ್ರಕರ್ತನ ಬದುಕು ಬಹಳ ಕಷ್ಟ. ಭಾರತದ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯ ಮೂಲ ಸ್ವರೂಪ ಕೊಟ್ಟಿದ್ದೇ ಪತ್ರಿಕೆಗಳು ಎಂದರು.

ದೇಶ ಎಂದರೆ ಅದರ ಆಗು-ಹೋಗುಗಳಿಗೆ ಪ್ರತಿಯೊಬ್ಬ ಪ್ರಜೆಯೂ ಕಾರಣನಾಗಿರುತ್ತಾನೆ. ಅದರಲ್ಲೂ ಮಾಧ್ಯಮದ ಜವಾಬ್ದಾರಿ ಬಹಳ ಪ್ರಮುಖವಾಗಿರುತ್ತದೆ. ಪತ್ರಕರ್ತ ಈ ನೆಲದ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಪತ್ರಿಕಾ ರಂಗದಲ್ಲಿ ಹಲವು ಬಿಕ್ಕಟ್ಟುಗಳಿವೆ. ಪತ್ರಕರ್ತರ ಬದುಕು ಕೂಡಾ ದುಸ್ತರವಾಗಿದೆ. ಹಲವು ಮಾಧ್ಯಮಗಳು ಜಾತಿ, ಧರ್ಮ, ರಾಜಕಾರಣವನ್ನೇ ಮೈತುಂಬಿಕೊಂಡು ನಿಜವಾದ ಸುದ್ದಿಗಳ ಬದ್ಧತೆ ಮರೆತು ನೈತಿಕತೆಯ ಎಲ್ಲೆ ಮೀರುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದರು.

ನಗರಸಭಾ ಅಧ್ಯಕ್ಷ ಅಶ್ಪಾಕ ಶೇಖ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯಲ್ಪಡುವ ಪತ್ರಿಕಾ ರಂಗವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ನಮ್ಮನ್ನ ಜಾಗ್ರತವಾಗಿಡುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದರು.

ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಮಾತನಾಡಿ, ದಾಂಡೇಲಿಯ ಪತ್ರಕರ್ತರು ಆದರ್ಶವಾಗಿದ್ದಾರೆ ಎಂದರು. ಆರಕ್ಷಕ ಉಪ ಅಧೀಕ್ಷಕ ಶಿವಾನಂದ ಮದರಕಂಡಿ ಮಾತನಾಡಿ, ದೃಶ್ಯ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಅವಸರದ ಸುದ್ದಿಗಳು ಬರುತ್ತಿವೆ. ಪತ್ರಿಕೆಗಳು ತನ್ನ ಘನತೆಯನ್ನು ಇನ್ನೂ ಉಳಿಸಿಕೊಂಡಿವೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ದಾಂಡೇಲಿ ಪತ್ರಕರ್ತರ ಸಮನ್ವಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಶೈಲೇಶ ಪರಮಾನಂದ, ವೆಸ್ಟ್‌ಕೊಸ್ಟ್‌ ಪೇಪರ್ ಮಿಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಸದಸ್ಯ ಅನಿಲ ಪಾಟ್ನೇಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಉಪಸ್ಥಿತರಿದ್ದರು.

ದಾಂಡೇಲಿ ಪ್ರೆಸ್ ಕ್ಲಬ್‌ ಅಧ್ಯಕ್ಷ ಸಂದೇಶ ಎಸ್. ಜೈನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ದಿನಾಚರಣೆಯ ಭಾಗವಾಗಿ ಕೋವಿಡ್ ಕಾಲದಲ್ಲಿ ಸೋಂಕು ಪೀಡಿತರಿಗೆ ಆಹಾರ ಒದಗಿಸಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಸಾರಾ ಕ್ರಿಸ್ಟನಮ್ಮ ಹಾಗೂ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಸ್ವ ಪ್ರಯತ್ನದಿಂದ ಸ್ವ ಉದ್ಯೋಗ ನಡೆಸುತ್ತಿರುವ ಅಜಯಕುಮಾರ ಓಬಳೇಶ ಹರಿಜನ ಎಂಬ ಈರ್ವರು ಶ್ರಮಜೀವಿಗಳನ್ನು ಗೌರವಿಸಲಾಯಿತು.

ಪದ್ಮಶ್ರೀ ಜೈನ ಪ್ರಾರ್ಥಿಸಿದರು. ಬಿ.ಎನ್. ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಕ್ಷಯಗಿರಿ ಗೋಸಾವಿ, ರಾಜೇಶ ತಳೇಕರ ಅತಿಥಿಗಳನ್ನು ಪರಿಚಯಿಸಿದರು. ಪ್ರವೀಣಕುಮಾರ ಸುಲಾಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಕೃಷ್ಣಾ ಪಾಟೀಲ್ ಅಪ್ತಾಬ ಶೇಕ್ ಸಹಕರಿಸಿದರು.