ಸಾರಾಂಶ
ಕಡೂರು ತಾಲ್ಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಸ್ಥಾನದಲ್ಲಿ ನಡೆದ ರಂಗಗೀತೆಗಳ ಪ್ರಸ್ತುತಿ ಕಾರ್ಯಕ್ರಮದಲ್ಲಿ ರಂಗಕರ್ಮಿ ವೈ.ಎಂ,ಪುಟ್ಟಣ್ಣಯ್ಯನವರನ್ನು ಶ್ರೀ ಸ್ವರ್ಣಾಂಬ ದೇವಾಲಯದ ಸಮಿತಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣರವರು ಗೌರವಿಸಿದರು.
ಕನ್ನಡಪ್ರಭ ವಾರ್ತೆ ಕಡೂರು
ನಶಿಸುತ್ತಿರುವ ರಂಗಕಲೆ ಜೀವಂತವಾಗಿಡಲು ಕನ್ನಡ ಸಂಸ್ಕೃತಿ ಇಲಾಖೆ ಹೆಚ್ಚು ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ರಂಗನಿರ್ದೇಶಕ ಮೈಸೂರು ವೈ.ಎಂ.ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಸ್ಥಾನದಲ್ಲಿ ನಡೆದ ರಂಗಗೀತೆಗಳ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ರರಂಗಕ್ಕೆ ತಳಹದಿಯೇ ರಂಗಕಲೆಯಾಗಿದೆ. ಖ್ಯಾತಿ ಪಡೆದ ಹಿರಿಯ ನಟರೆಲ್ಲರೂ ರಂಗನಟರಾಗಿದ್ದರು. ಪ್ರೇಕ್ಷಕರಿಗೆ ಮನರಂಜನೆ ಜೊತೆ ಶಿಕ್ಷಣ ಜ್ಞಾನವನ್ನೂ ರಂಗಕಲೆ ನೀಡುತ್ತಿತ್ತು. ಇಂದಿಗೂ ನಾಟಕಗಳಲ್ಲಿದ್ದಂತಹ ಹಳೆಯ ರಂಗಗೀತೆಗಳು ಅತ್ಯಂತ ಮನೋಜ್ಞ ಮತ್ತು ಅರ್ಥವತ್ತಾಗಿವೆ ಎಂದರು.ಅರ್ಥವೇ ಇಲ್ಲದಂತಹ ಗೀತೆಗಳ ನಡುವೆ ರಂಗಗೀತೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಆಧುನಿಕತೆ ನಡುವೆ ಜೀವಂತ ಕಲೆಯೆನಿಸಿದ ರಂಗಕಲೆ ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾಧಕರ ಸಂಗತಿ. ಗ್ರಾಮೀಣ ಭಾಗಗಳಲ್ಲಿ ಈ ಕಲೆ ಒಂದಿಷ್ಟು ಉಳಿದುಕೊಂಡಿದೆ. ಈ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಇದರ ಪ್ರಾಮುಖ್ಯತೆ ತಿಳಿಸುವ ಕಾರ್ಯವಾಗಬೇಕಿದೆ. ಕನ್ನಡ ಸಂಸ್ಕೃತಿ ಇಲಾಖೆ ಇದರತ್ತ ಗಮನ ಹರಿಸಬೇಕು ಎಂದರು.ದೇವಸ್ಥಾನ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ 60 ವರ್ಷಗಳಿಂದ ನಾಟಕ ರಂಗಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಗ್ರಾಮಸ್ಥರೇ ಪಾತ್ರಧಾರಿಗಳಾಗಿ ರಾಮಾಯಣ, ಮಹಾಭಾರತದಂತಹ ಪೌರಾಣಿಕ ನಾಟಕ ಆಯೋಜಿಸಲಾಗುತ್ತಿತ್ತು. ಹಿರಿಯ ರಂಗ ನಿರ್ದೇಶಕ ಮುದ್ದರಂಗಪ್ಪ, ಗುಬ್ಬಿ ಕಂಪನಿಯ ಕಲಾವಿದರೂ ಸಹ ಇಲ್ಲಿಗೆ ಬರುತ್ತಿದ್ದುದನ್ನು ನೆನಪಿಸಿಕೊಂಡರು.ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಎಂ.ಆರ್.ಧರ್ಮಣ್ಣ, ಎಂ.ವೈ.ಚಂದ್ರಶೇಖರ, ಸ್ವರ್ಣಾಂಬ ನಾಟಕ ಮಂಡಳಿ ಸದಸ್ಯರು ಇದ್ದರು.ಪುಟ್ಟಣ್ಣಯ್ಯನವರು ಕೃಷ್ಣಗಾರುಡಿ, ಸಂಪೂರ್ಣ ರಾಮಾಯಣ, ಸದಾರಮೆ ಮುಂತಾದ ನಾಟಕಗಳ ಆಯ್ದ ಗೀತೆಗಳ ಜೊತೆ ಬೆಳ್ಳಾವೆ ನರಹರಿಶಾಸ್ತ್ರಿ, ಕು.ರಾ.ಸೀ ಅವರ ರಚನೆಗಳನ್ನು ಪ್ರಸ್ತುತ ಪಡಿಸುವುದರ ಜೊತೆ ಹಿರಿಯ ರಂಗನಟ ಆರ್.ಪರಮಶಿವನ್, ಗುಬ್ಬಿ ವೀರಣ್ಣ, ಶ್ರೀ ಸ್ತ್ರೀ ನಾಟಕ ಮಂಡಳಿಯ ಜೊತೆಗಿನ ತಮ್ಮ ಅನುಭವ ಹಂಚಿಕೊಂಡರು. ಯುವ ರಂಗ ಕಲಾವಿದರಾದ ಸುಪ್ರೀತ್ ಭರದ್ವಾಜ್, ಸುರಭಿ, ಭ್ರಮರ ಆಯ್ದ ರಂಗಗೀತೆಗಳನ್ನು ಹಾಡಿದರು.