ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಲಿ

| Published : May 07 2024, 01:05 AM IST

ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಬಿ.ವಾಮದೇವಪ್ಪ ಇತರರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

109 ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ದೇಶ ಈಡೇರುತ್ತದೆ ಎಂದು ವಿಶ್ರಾಂತ ಉಪನ್ಯಾಸಕ ಜಿ.ಎಸ್.ಸುಭಾಷ್ ಚಂದ್ರ ಬೋಸ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರವಲ್ಲದೇ ಅನೇಕ ಮಹನೀಯರು, ಸಾಹಿತಿಗಳು ಬೆಳೆಸಿದ್ದಾರೆ. 1970ರ ಈಚೆಗೆ ಸಾಹಿತ್ಯ ಪರಿಷತ್ತು ಅತ್ಯಂತ ಬೃಹತ್ತಾಗಿ ಬೆಳೆದಿದೆ. ಅನೇಕ ಸಮ್ಮೇಳನಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಯೋಜಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ಆದರೆ ಜನ ಸಾಮಾನ್ಯರ ಪರಿಷತ್ತಾಗದೇ ಇರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪರಿಷತ್ತಿನ ಮೂಲ ಆಶಯದಂತೆ ನಮ್ಮ ಜಿಲ್ಲೆಯಲ್ಲಿ ಹಲವಾರು ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ವಾಗ್ಮಿಗಳಿಗೆ, ಕಲಾವಿದರುಗಳಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಲಾಗಿದೆ. ಕಳೆದ 30 ತಿಂಗಳುಗಳಲ್ಲಿ 3 ಜಿಲ್ಲಾ ಸಮ್ಮೇಳನ, 6 ತಾಲೂಕು ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಾಗೆಯೇ ಜನರು ಕೂಡಾ ಪರಿಷತ್ತಿನ ಮೇಲೆ ಪ್ರೀತಿ, ಕಾಳಜಿ ಹಾಗೂ ಗೌರವ ಬೆಳೆಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.

ಹರಪನಹಳ್ಳಿಯ ಎಡಿಬಿಎಫ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎ.ಎಂ.ರಾಜಶೇಖರಯ್ಯ ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ವಿಷಯ ಕುರಿತು ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಸಂಗೀತ ಶಿಕ್ಷಕ ರೇವಣಸಿದ್ದಪ್ಪ, ವಚನಾಮೃತ ಬಳಗದ ಸಂಸ್ಥಾಪಕಿ ಸೌಮ್ಯ ಸತೀಶ್, ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಸಂಘಟನಾ ಕಾರ್ಯದರ್ಶಿ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ, ಕೆ.ಎಸ್.ವೀರೇಶ್‌ಪ್ರಸಾದ್, ಎನ್.ಎಸ್.ರಾಜು, ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ರುದ್ರಾಕ್ಷಿ ಬಾಯಿ, ಭೈರವೇಶ್ವರ, ನಾಗರಾಜ ಸಿರಿಗೆರೆ, ಪರಮೇಶ್ವರಪ್ಪ ದಾಗಿನಕಟ್ಟೆ, ಬೇತೂರು ಎಂ ಷಡಾಕ್ಷರಪ್ಪ, ಆರ್.ಶಿವಕುಮಾರ, ಬ್ಯಾಂಕ್ ನೌಕರರ ಸಂಘದ ವಿಶ್ವನಾಥ್ ಬಿಲ್ಲವ, ಪರಶುರಾಮ, ಎಚ್.ಎಸ್.ತಿಪ್ಪೇಸ್ವಾಮಿ, ಜಿ.ರಂಗಸ್ವಾಮಿ, ಅಜಿತ್ ಕುಮಾರ್, ಹೆಚ್.ಸುಗೂರಪ್ಪ, ನಾಗೇಶ್ವರಿ ನಾಯರಿ, ಸಾಕಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಳವಾಡೆ, ಅಣ್ಣಪ್ಪ ನಂದಾ ಹಾಗೂ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ.ಮಹಾಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಡಾ.ಎಂ.ಕೆ.ಗೌಡ, ಸಿಂಗಾಪುರ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನೌಕರರ ಸಂಘದ ಅಖಿಲ ಭಾರತ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕಗೊಂಡ ಕೆನರಾ ಬ್ಯಾಂಕ್ ಉದ್ಯೋಗಿ ಕೆ.ರಾಘವೇಂದ್ರ ನಾಯರಿಯವರನ್ನು ಕಸಾಪ, ನಿವೃತ್ತ ಬ್ಯಾಂಕ್ ಒಕ್ಕೂಟ, ಇತರೆ ಸಂಘಟನೆಯವರು ಸನ್ಮಾನಿಸಿದರು.

ವಚನಾಮೃತ ಬಳಗದ ಸದಸ್ಯೆಯರು ನಾಡಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.