ಸಾರಾಂಶ
ಬೀರೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಶಾಲೆ ನೂತನ ಕಚೇರಿ । ಬಹುಮಹಡಿ ಕೊಠಡಿಗಳ ಉದ್ಘಾಟನೆಕನ್ನಡಪ್ರಭ ವಾರ್ತೆ, ಬೀರೂರು.ಶಿಕ್ಷಕರು ಪಠ್ಯಕ್ರಮಗಳಿಂದ ಮಕ್ಕಳ ವ್ಯಕ್ತಿತ್ವ ರೂಪಿಸಲು ಸಾಧ್ಯವಿಲ್ಲ. ಅವರಿಗೆ ಈ ನೆಲದ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವ ಜೊತೆಗೆ ರಾಜ್ಯಾಭಿಮಾನ ಮತ್ತು ರಾಷ್ಟ್ರಾಭಿಮಾನ ಮೂಡಿಸಿದಾಗ ಮಾತ್ರ ಉತ್ತಮ ಪ್ರಜೆಯಾಗಿ ರೂಪಿಸಬಹುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಗುರುವಾರ ಬೀರೂರು ಪಟ್ಟಣದ ರಾಜ್ಯ ಹೆದ್ದಾರಿ ಮದ್ಯಭಾಗದಲ್ಲಿರುವ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಶಾಲೆ ನೂತನ ಕಚೇರಿ ಮತ್ತು ಬಹುಮಹಡಿ ಕೊಠಡಿಗಳ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. 1953 ಕ್ರೀಡಾ ಪ್ರೇಮಿಗಳು ಕನ್ನಡನಾಡಿನ ಸೇವೆಗಾಗಿ ಸ್ಥಾಪನೆಯಾದ ಸಂಘ 1971ರಲ್ಲಿ ಕರ್ನಾಟಕ ಸಂಘವಾಗಿ ತನ್ನ ಕಾರ್ಯಚಟುವಟಿಕೆ ನಡೆಸಿತು. 1990ರಲ್ಲಿ ಕನ್ನಡ ಸಂಘವೆಂದು ಮಾರ್ಪಟ್ಟು ವರನಟ ದಿ. ಡಾ. ರಾಜ್‌ಕುಮಾರ್ ಅವರಿಂದ ಉದ್ಘಾಟನೆಯಾಗಿತ್ತು. ಸದ್ಯ 55 ವರ್ಷ ಪೂರೈಸಿರುವುದು ಸಂತಸ ತಂದಿದೆ ಎಂದರು.ಈ ಸಂಘ ಸಾಮಾಜಿಕ ಚಟುವಟಿಕೆಗಳ ಮೂಲಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಮಕ್ಕಳ ಭವಿಷ್ಯದ ಭೂನಾದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಲಾಭ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಕನ್ನಡ ಸಂಘ ಅದನ್ನು ಬಯಸದೇ ಮಕ್ಕಳ ಭವಿಷ್ಯ ಕಟ್ಟಲು ಪಣತೊಟ್ಟಿರುವುದು ಶ್ಲಾಘನೀಯ. ನನ್ನ ರಾಜಕೀಯ ಗುರು ಕೆ.ಬಿ.ಮಲ್ಲಿಕಾರ್ಜುನ್ ಇದರ ನೇತೃತ್ವವಹಿಸಿರುವುದರಿಂದ ಕಳೆದ 25 ವರ್ಷಗಳಿಂದ ಶಾಲೆ ಶೇ.100ರಷ್ಟು ಫಲಿತಾಂಶ ಸಾಧಿಸಿರುವುದು ಹೆಮ್ಮೆಯ ವಿಷಯ. ಮಕ್ಕಳು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಬಾರದು. ಮಕ್ಕಳಲ್ಲಿ ಜ್ಯಾತ್ಯಾತೀತತೆ ಬಿತ್ತುವುದು ಇಂದು ಶಿಕ್ಷಕರಿಗೆ ತಲೆನೋವಾಗಿದ್ದು, ಕನ್ನಡ ಸಂಘ ಮಕ್ಕಳಿಗೆ ವಿದ್ಯಾದಾನದಲ್ಲಿ ಮತ್ತಷ್ಟು ಪ್ರಜ್ವಲಿಸಲಿ ಎಂದು ಶುಭಹಾರೈಸಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, ನಮ್ಮ ಪೂರ್ವಜರು ನಮ್ಮ ಮಕ್ಕಳು ಶಿಕ್ಷಣ ಕ್ಷೇತ್ರದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲೂ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿದ್ದರು. ಆದರೆ ಅವುಗಳ ಸ್ಥಿತಿ ಇಂದು ಅಧೋಗತಿ ತಲುಪಿದೆ. ಗುಣ ಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಮೌಲ್ಯಯುತ ಶಿಕ್ಷಣ ಇಂದು ದೊರಕುತ್ತಿಲ್ಲ. ಸಂಬಂಧ ಗಳ ನೆಲೆಗಟ್ಟಿನಲ್ಲಿ ನಿಂತಿರುವ ನಮ್ಮ ದೇಶದಲ್ಲಿ ಗುರು ಶಿಷ್ಯ, ತಂದೆ ತಾಯಿ ಸಂಬಂಧ ದೂರವಾಗುತ್ತಿರುವುದು ವಿಷಾಶನೀಯ ಎಂದರು. ಮಾನವೀಯತೆ ಶಿಕ್ಷಣ ದೊರಯುತ್ತಿಲ್ಲ. ಶಿಕ್ಷಕರು ಮಕ್ಕಳಿಗೆ ಜೀವನ ಶಿಕ್ಷಣ ಕಲಿಸಿ, ಬಾಲ್ಯದಲ್ಲಿ ಪೋಷಕರು ಕಷ್ಟದ ಅರಿವು ಮೂಡಿಸಿದರೆ ಮುಂದೆ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಶಕ್ತರಾಗುತ್ತಾರೆ. ಸರ್ಕಾರ ಮಾಡದ ಕೆಲಸವನ್ನು ಶಿಕ್ಷಣ ನೀಡುವ ಮೂಲಕ ಕನ್ನಡಸಂಘ ಮಾಡುತ್ತಿದೆ ಎಂದರು. ಪುರಸಭೆ ಅಧ್ಯಕ್ಷೆ ವನಿತಾ ಮಧು ಮಾತನಾಡಿ, ಕನ್ನಡ ಸಂಘ ಸ್ಥಾಪಿಸಿರುವ ಬ್ರೈಟ್ ಫ್ಯೂಚರ ಶಾಲೆ ಹೆಸರೆ ತಿಳಿಸುವಂತೆ ಇಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳ ಭವಿಷ್ಯ ಉಜ್ವಲವಾಗಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಮಕ್ಕಳ ದಿನಾಚರಣೆ ಸಂದರ್ಭ ದಲ್ಲಿ ಶುಭಾಷಯ ತಿಳಿಸಿದ ಅವರು, ಗುರು ಕೇವಲ ವ್ಯಕ್ತಿಯಲ್ಲ ಶಕ್ತಿ. ಶಿಕ್ಷಕರು ಇಡೀ ಜಗತ್ತನ್ನು ಬೆಳಗಿಸುವ ದೀಪವಾಗಿದ್ದು, ಮಕ್ಕಳು ಪುಸ್ತಕವನ್ನೆ ಸ್ನೇಹಿತನನ್ನಾಗಿ ಮಾಡಿಕೊಂಡರೆ ಅದು ನೀವು ತಲೆ ಎತ್ತುವಂತೆ ಮಾಡುತ್ತದೆ ಎಂದರು. ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಮಾತನಾಡಿ, ಪಟ್ಟಣದ ಅನೇಕ ಕ್ರೀಡಾ, ಮತ್ತು ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಈ ಸಂಘ ಸ್ಥಾಪನೆಯಾಗಿದ್ದು, ಸಂಘದ ಮೂಲ ಉದ್ದೇಶ ಶಿಕ್ಷಣಕ್ಕೆ ಒತ್ತು ನೀಡುವುದು. ಅದರಂತೆ ಬೀರೂರಿನ ಜನತೆ ಇದರ ಬೆನ್ನುಲುಬಾಗಿ ನಿಂತಿರುವುದಕ್ಕೆ ಧನ್ಯವಾದ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಶಾಸಕರ ಸಹಕಾರ ಪಡೆದು ಪಿಯುಸಿ ಪ್ರಾರಂಭಿಸಲಾಗುವುದು ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಕೃತಜ್ಞತೆಗಳು ಎಂದರು.ಸಂಘದ ಗೌರವ ಅಧ್ಯಕ್ಷ ಕೆ.ಬಿ.ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ , ಖಜಾಂಚಿ ನಾರಾಯಣ್, ಮುಖ್ಯ ಶಿಕ್ಷಕ ಎಚ್.ಬಿ.ತಮ್ಮಣಪ್ಪ, ಸಬೀನ ಮೇರಿ, ಸಿಪಿಐ ಶ್ರೀಕಾಂತ್, ಹಾಗೂ ಶಿಕ್ಷಣ ಸಂಸ್ಥೆ ಎಲ್ಲಾ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.14 ಬೀರೂರು 1ಬೀರೂರು ಪಟ್ಟಣದ ಕನ್ನಡ ಸಂಘದ ಆಶ್ರಯದ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಶಾಲೆಯ ನೂತನ ಕಚೇರಿ ಮತ್ತು ಬಹುಮಹಡಿ ಕೊಠಡಿಗಳನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಸ್.ಬೋಜೆಗೌಡ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕನ್ನಡ ಸಂಘದ ಅಧ್ಯಕ್ಷ ಹೆಚ್.ಸಿ.ವಿಶ್ವನಾಥಗೌಡ ಮತ್ತಿತರರು ಇದ್ದರು.