ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ದೊರೆಯಲಿ

| Published : Nov 04 2024, 12:28 AM IST

ಸಾರಾಂಶ

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷ ಕಳೆದಿದೆ. ಆದರೂ ಕೂಡ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ಗೌರವ ದೊರೆಯುತ್ತಿಲ್ಲ ಎಂದು ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ಶಫಿವುಲ್ಲಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷ ಕಳೆದಿದೆ. ಆದರೂ ಕೂಡ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ಗೌರವ ದೊರೆಯುತ್ತಿಲ್ಲ ಎಂದು ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ಶಫಿವುಲ್ಲಾ ತಿಳಿಸಿದರು.

ತಾಲೂಕಿನ ಯರದಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಸೇನೆಯ ಸಹಯೋಗದಲ್ಲಿ ಏರ್ಪಡಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಿ ಮಾತನಾಡಿದ ಅವರು ಗ್ರಾಮಾಂತರ ಭಾಗದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು ಕನ್ನಡ ಭಾಷೆಯನ್ನು ಗೌರವಿಸುವುದಾದರೆ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು ಎಂದರು.

ಕನ್ನಡ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸುವರ್ಣಮ್ಮ ಮಾತನಾಡಿ, ಕನ್ನಡಿಗರದ್ದು ಮಾತೃ ಹೃದಯ. ನಾವು ಹೃದಯ ಶ್ರೀಮಂತಿಕೆ ಉಳ್ಳವರಾಗಿದ್ದು, ಭಾಷೆಯ ಬಗ್ಗೆ ದುರಭಿಮಾನ ಬಿಟ್ಟು ಅಭಿಮಾನ ಬೆಳೆಸಿಕೊಳ್ಳೋಣ. ಕನ್ನಡದಲ್ಲಿಯೇ ಮಾತನಾಡೋಣ. ಸ್ವಚ್ಛಂದವಾದ ಭಾಷೆಯಾದ ಕನ್ನಡ ಭಾಷೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಬಾಂಧವ್ಯ ರೂಡಿಸಿಕೊಳ್ಳುವ ಭಾಷೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪಿ. ನಾಗರಾಜಪ್ಪ, ಸೇನೆಯ ಗೌರವಾಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಭೀಮಣ್ಣ, ನಿರ್ದೇಶಕರಾದ ಆಸಿಫ್, ಮನು, ದಾದಾ ಕಲಂಧರ್, ದಾನಿಗಳಾದ ಡಿಕೆ. ಲೋಕೇಶ್, ಎಸ್ ಡಿಎಂಸಿ ಅಧ್ಯಕ್ಷ ಅಜ್ಜಯ್ಯ, ಸದಸ್ಯರಾದ ಭವ್ಯ, ಶಿವರುದ್ರಮ್ಮ, ಪೂಜಾ, ಶಿಕ್ಷಕ ಟಿ. ಮಹಾಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.