ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವ ಜನಾಂಗಕ್ಕೆ ಪುಸ್ತಕ ಜ್ಞಾನದ ಜೊತೆಗೆ ಕೌಶಲ್ಯಗಳನ್ನೂ ಕಲಿಸಬೇಕಾದ ತುರ್ತು ಅಗತ್ಯವಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಎಚ್.ಕೆ. ಸ್ವಾಮಿ ಹೇಳಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಂವಾದ ಯುವ ಸಂಪನ್ಮೂಲ ಕೇಂದ್ರ ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಆಯೋಜಿಸಿದ್ದ ಸಂವಿಧಾನ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವ ಜನಾಂಗಕ್ಕೆ ಸ್ವ ಹುದ್ದೆಗಳನ್ನು, ಸ್ವಾವಲಂಬಿ ಜೀವನವನ್ನು ಪ್ರಾರಂಭಿಸುವಂತಹ ಶಿಕ್ಷಣದ ಅಗತ್ಯವಿದೆ. ಆಹಾರದ ಜೊತೆಗೆ ಬಟ್ಟೆಯನ್ನು ಸಂಪಾದಿಸಿಕೊಳ್ಳುವಂತೆ ಅವರನ್ನು ತರಬೇತಿಗೊಳಿಸಿ, ಬಡತನ, ನಿರುದ್ಯೋಗದಿಂದ ಮುಕ್ತಗೊಳಿಸಬೇಕಾಗಿದೆ ಎಂದರು.
ಯುವ ಜನಾಂಗಕ್ಕೆ ಕೆಲಸಗಳ ಪರಿಚಯವಿಲ್ಲದಂತಾಗಿದೆ. ಚರಕದಿಂದ ದಾರ ಮಾಡಿ, ದಾರದಿಂದ ಬಟ್ಟೆ ಮಾಡಿಕೊಳ್ಳುವ ಪ್ರಕ್ರಿಯೆ ಸಹ ಮರೆತು ಹೋಗಿದೆ. ಗಾಂಧೀಜಿಯವರ ಚಿಂತನೆಗಳನ್ನ ಯುವ ಜನಾಂಗಕ್ಕೆ ಪರಿಚಯಿಸಿ, ಚರಕದ ತರಬೇತಿ ನೀಡಿ ಮತ್ತೊಮ್ಮೆ ನಾವು ಗಾಂಧೀಜಿಯವರ ಕನಸುಗಳನ್ನ ನನಸಾಗಿಸಬಹುದೇ ಎಂಬ ಪ್ರಶ್ನೆ ಮುಂದಿಟ್ಟರು.ಪ್ಲಾಸ್ಟಿಕ್ ದುರ್ಬಳಕೆಯಿಂದಾಗಿ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳನ್ನು ಯುವಕರು ಎಚ್ಚರಿಕೆಯಿಂದ ಗಮನಿಸಬೇಕು. ಸಂಪನ್ಮೂಲಗಳ ಮಿತ ಬಳಕೆ ಮಾಡಿ, ಸರಳ ಜೀವನ ಅಳವಡಿಸಿಕೊಳ್ಳುವ ಮೂಲಕ ಯುವ ಜನಾಂಗ ದೇಶ ಕಟ್ಟಲು ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮಹಮದ್ ಜಫರ್ ಇಕ್ಬಾಲ್ ಅವರು, ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು, ಜವಾಬ್ದಾರಿಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು.ಮಹಿಳೆಯರ ದೌರ್ಜನ್ಯಗಳ ನಿವಾರಣೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ಸಂಬಂಧಗಳನ್ನ ಅರಿತುಕೊಂಡು ಗೌರವಿಸುವುದನ್ನು ಕಲಿತರೆ ಸಮಾಜ ಸುಸ್ಥಿತಿಯಲ್ಲಿರುವುದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣನವರು ಮಾತನಾಡಿ, ಪರಿಸರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸಬೇಕು. ಪ್ರತಿಯೊಬ್ಬರೂ ಅರಣ್ಯೀಕರಣದ ಬಗ್ಗೆ ಅರಿವು ಹೆಚ್ಚಿಸಿಕೊಂಡು, ಮಾಲಿನ್ಯ ನಿವಾರಿಸಿ, ನದಿ ಮೂಲಗಳನ್ನ ಸಂರಕ್ಷಿಸಬೇಕು. ನದಿಯ ಸಂರಕ್ಷಣೆ ಬಗ್ಗೆ ಯುವ ಜನಾಂಗ ಜಾಗೃತರಾಗಿರುವುದು ಒಳ್ಳೆಯ ಲಕ್ಷಣ ಎಂದು ತಿಳಸಿದರು.ಈ ವೇಳೆ ಎನ್ಎಸ್ಎಸ್ ಅಧಿಕಾರಿ ಡಾ.ಪಿ.ಟಿ ಮಂಜುನಾಥ್, ಸಂವಾದ ಕಾರ್ಯನಿರ್ವಾಹಕ ನಿರ್ದೇಶಕಿ ಸವಿತಾ ಸುರೇಶ್ ಬಾಬು, ಸಂವಾದ ಯುವ ಸಂಪನ್ಮೂಲದ ಸಂಚಾಲಕಿ ನೇತ್ರ ಸೂರ್ಯ ಮಾತನಾಡಿದರು.