ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಈ ಭಾಗದಲ್ಲಿ ಶಾಂತವೀರ ಪಟ್ಟಾಧ್ಯಕ್ಷರ ಈ ಆಶ್ರಮ ಎರಡನೇ ಸಿಂದಗಿ ಮಠವೆಂದು ಪ್ರಸಿದ್ದಿ ಆಗಲಿ, ಹಾಗೆಯೇ ಈ ಭಾಗಕ್ಕೆ ಅವಶ್ಯವಿದ್ದ ಪಾಠಶಾಲೆ ಈಗಾಗಲೇ ಪ್ರಾರಂಭವಾಗಿದೆ. ಮುಂಬರುವ ದಿಗಳಲ್ಲಿ ವೇದ, ಜೊತಿಷ್ಯದಂತಹ ಪಾಠಗಳು ಹಾಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹಾವೇರಿ ಮಠದ ಸದಾಶಿವ ಮಹಾಸ್ವಾಮಿಗಳು ಕರೆ ನೀಡಿದರು.ಇಲ್ಲಿಗೆ ಸಮೀಪದ ಬಳ್ಳಿಗಾವಿ ಗ್ರಾಮದಲ್ಲಿ ಕಳೆದ ೫ ದಿನಗಳಿಂದ ನಡೆಯುತ್ತಿದ್ದ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದಲ್ಲಿ ಅತಿಯಾದ ಶ್ರಮವಹಿಸಿ ಈ ಆಶ್ರಮ ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು ಉತ್ತಮವಾಗಿ ಬೆಳೆಯಲಿದೆ ಎಂದರು.
ಹಾನಗಲ್ಲಿನಲ್ಲಿ ಕುಮಾರಸ್ವಾಮಿಗಳು ಶಿವಯೋಗ ಮಂದಿರ ಸ್ಥಾಪನೆ ಮಾಡಿದರು. ಅವರ ಶಿಷ್ಯರಾದ ಸಿಂದಗಿ ಶಾಂತವೀರೇಶ್ವರರು ಹಾವೇರಿಯಲ್ಲಿ ಸಿಂದಗಿ ಮಠವನ್ನು ನಿರ್ಮಾಣ ಮಾಡಿದರು. ಅದು ಎರಡನೇ ಶಿವಯೋಗ ಮಂದಿರವೆಂದು ಪ್ರಸಿದ್ಧಿ ಪಡೆಯಿತು.ಬಳ್ಳಿಗಾವಿಯಲ್ಲಿ ಈಗ ಸಿಂದಗಿ ಮಠದ ಶಿಷ್ಯರಾದ ವಾಗೀಶ ಶಾಸ್ತ್ರಿಗಳು ಶಿರಾಳಕೊಪ್ಪದ ಹತ್ತಿರದ ಬಳ್ಳಿಗಾವಿ ಗ್ರಾಮದಲ್ಲಿ ಸಿಂದಗಿ ಮಠ ಪ್ರಾರಂಭಮಾಡಿ ಎರಡನೇ ಸಿಂದಗಿ ಮಠ ಆಗಿ ಪ್ರಸಿದ್ಧಿ ಹೊಂದಲಿ ಎಂದು ಆಶೀರ್ವದಿಸಿದರು.
ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪನವರ ಸೊಸೆ ತೇಜಸ್ವಿನಿ, ಪುತ್ರಿಅರುಣಾ ದೇವಿ ಸಮಾರೋಪ ಭಾಷಣ ಮಾಡಿ, ಇಂತಹ ಪವಿತ್ರವಾದ ಕಾರ್ಯಕ್ರಮದಲ್ಲಿ ಅತಿಹೆಚ್ಚು ತಾಯಂದಿರು ಆಗಮಿಸಿರುವುದನ್ನು ನೋಡಿ ಸಂತಸವಾಗಿದೆ. ಆದರೆ ತಾಯಂದಿರು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕರೆತಂದು ಅವರಲ್ಲಿ ಧಾರ್ಮಿಕ ಭಾವನೆಗಳನ್ನು ಹುಟ್ಟುಹಾಕಬೇಕು. ಒಂದು ಕುಟುಂಬ ಮುಂದೆಬರಲು ಹಾಗೂ ಪ್ರಸಿದ್ಧಿ ಪಡೆಯಲು ತಾಯಿಯ ಸಹಕಾರ ಅತ್ಯವಶ್ಯಕ ಎಂದರು.
ಕಳೆದ ೫ ದಿನಗಳಿಂದ ಅಶ್ರಮದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಸಂಸ್ಥಾಪಕ ವಾಗೀಶ ಶಾಸ್ತ್ರಿಗಳು ಪ್ರಾಸ್ತವಿಕವಾಗಿ ಮಾತನಾಡಿ, ಶಾಂತವೀರೇಶ್ವರರ ಕಾರ್ಯಗಳ ಬಗ್ಗೆ ಹಾಗೂ ಸೇವಾ ಕಾರ್ಯದ ಬಗ್ಗೆ ವಿವರಣೆ ನೀಡಿದರು.
೫ ದಿನದ ಕಾರ್ಯಕ್ರಮದಲ್ಲಿ ಶಿರಾಳಕೊಪ್ಪ ವಿರಕ್ತಮಠದ ವೀರಬಸವ ದೇವರು ಮಹಾತ್ಮರ ಜೀವನ ದಶರ್ನದ ಬಗ್ಗೆ ಪ್ರವಚನ ನೀಡಿದರು. ಪ್ರತಿದಿನ ಒಬ್ಬರಂತೆ ಸಂಗೀತ ಸೇವೆ, ಪ್ರತಿದಿನ ವಿವಿದ ಮಠಗಳ ಸ್ವಾಮಿಗಳು ಸಾನ್ನಿದ್ಯ ವಹಿಸಿದ್ದರು. ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಸರ್ಪದೋಷ ನಿವಾರಣೆಗೆ ಸಾಮೂಹಿಕ ಸರ್ಪತ್ರಯ ಮಂತ್ರ, ಆಶ್ಲೇಷ ಬಲಿ ಪೂಜೆ, ಸ್ವಯಂವರ ಪಾವರ್ತಿಪೂಜೆ, ದುರ್ಗಾದೀಪ ನಮಸ್ಕಾರ ಸೇವೆ, ದುರ್ಗಾ ಹೋಮ, ೧೦೮ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಹಾಗೆಯೇ ೧೦೮ ತಾಯಂದಿರಿಂದ ಲಲಿತಾ ಸಹಸ್ರನಾಮ ಪಾರಾಯಣ, ಗುರುಗಳಿಗೆ ಪ್ರತಿನಿತ್ಯ ಪೂಜೆ, ಕೊನೆಯ ದಿನವಾದ ಸೋಮವಾರದಂದು ತಾಯಂದಿರು ಮನೆಯಿಂದ ರೊಟ್ಟಿ ಬುತ್ತಿಯನ್ನು ತಂದು ಊಟ ಬಡಿಸಿದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.