ಸಾರಾಂಶ
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ರಾಮ ಪಂಚಾಯಿತಿಯಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಣೆ ಮಾಡುವಂತೆ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ಸೂಚಿಸಿದರು.ಗುರುವಾರ ಜಿಪಂನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಲ ಕಾಲಕ್ಕೆ ಗ್ರಂಥಾಲಯ ಮೇಲ್ವಿಚಾರಕರ ವೇತನವನ್ನು ಶಾಸನಬದ್ಧ ಖಾತೆಗೆ ಜಮಾ ಆದ ತಕ್ಷಣವೇ ಪಾವತಿಸಬೇಕು. ಗ್ರಂಥಾಲಯಕ್ಕೆ ಸುಸಜ್ಜಿತವಾದ ಕಟ್ಟಡ ವ್ಯವಸ್ಥೆ ಮಾಡಬೇಕು. ಎಲ್ಲ ಗ್ರಂಥಾಲಯ ಮೇಲ್ವಿಚಾರಕರೂ ಮೊಬೈಲ್ ಆ್ಯಪ್ ಆಧಾರಿತ ಹಾಜರಾತಿ ಅಳವಡಿಸಿಕೊಳ್ಳಬೇಕು. ಡಿಜಿ ವಿಕಾಸನ್ ಶಿಕ್ಷಣ ಫೌಂಡೇಶನ್ ಹಾಗೂ ಟಾಟಾ ಟ್ರಸ್ಟ್ ವತಿಯಿಂದ ನಡೆಯುವ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಲು ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರಿಗೆ ಗ್ರಂಥಾಲಯಕ್ಕೆ ಮಕ್ಕಳನ್ನು ಕಳುಹಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.ಶಿಕ್ಷಣ ಫೌಂಡೇಶನ್ ವತಿಯಿಂದ ಗ್ರಾಮ ಡಿಜಿ ವಿಕಾಸನ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ 65 ಗ್ರಾಪಂ ಗ್ರಂಥಾಲಯಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಆ ಕಾರ್ಯಕ್ರಮಕ್ಕೆ ಡಿಜಿಟಲ್ ಸಂಪನ್ಮೂಲಗಳನ್ನು ಈಗಾಗಲೇ ನೀಡಲಾಗಿದೆ. ಎರಡನೇ ಹಂತದಲ್ಲಿ 21 ಗ್ರಂಥಾಲಯಗಳಿಗೆ ಮಾನಿಟರ್, ಸ್ಪೀಕರ್, ಟಿವಿ ಸ್ಟಿಕ್, ಮೊಬೈಲ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಸಂಪನ್ಮೂಲಗಳಲ್ಲಿ 8, 9, 10, 12ನೇ ತರಗತಿಗಳ ವಿಡಿಯೋ ಪಾಠ ಹಾಕಲಾಗಿದೆ. ವಿದ್ಯಾರ್ಥಿಗಳ ನಿರಂತರ ಬಳಕೆಯ ಮೂಲಕ ತರಗತಿಯ ವಿಷಯಾಂಶಗಳನ್ನು ಕಲಿಕೆಯ ಪುನಶ್ಚೇತನ ಮಾಡಿಕೊಳ್ಳುವುದು ಹಾಗೂ ಡಿಜಿಟಲ್ ಕೌಶಲ್ಯಗಳ ಕುರಿತು ಶಿಕ್ಷಣ ಪಿಡಿಯಾ ಮೂಲಕ ಕಲಿತುಕೊಳ್ಳಲು ಡಿಜಿಟಲ್ ಸಂಪನ್ಮೂಲಗಳು ಗ್ರಂಥಾಲಯಕ್ಕೆ ಬರುವವರಿಗೆ ಅನುಕೂಲಕರವಾಗಿದೆ ಎಂದು ಜಿಲ್ಲಾ ಸಂಯೋಜಕ ಬಸವರಾಜ ಬಡಿಗೇರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಆಡಳಿತ ವಿಭಾಗದ ಸಹಾಯಕ ನಿರ್ದೇಶಕ ಶರಣು ಪೂಜಾರ, ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಯಮನೂರ, ವ್ಯವಸ್ಥಾಪಕಿ ನಿವೇದಿತಾ ಭಂಡಾರಿ ಸೇರಿದಂತೆ ಎಲ್ಲ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.