ಸಾರಾಂಶ
ಶಾಲಾ ಕೊಠಡಿಗಳ ರಿಪೇರಿ, ರಸ್ತೆ ಅಭಿವೃದ್ಧಿ, ಅಂಗನವಾಡಿ, ಆಸ್ಪತ್ರೆ ಕಟ್ಟಡಗಳ ಭೂಮಿಪೂಜೆಯನ್ನು ಶೀಘ್ರವೇ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಬೇಕು.
ಕೂಡ್ಲಿಗಿ: ತಾಲೂಕಿನಲ್ಲಿ ಮಂಜೂರಾಗಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ, ಜಿಲ್ಲಾ ಖನಿಜ ಪ್ರತಿಷ್ಠಾನ ಹಾಗೂ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಮುಗಿಸಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ವಿಳಂಬವಾದರೆ ಸಹಿಸುವುದಿಲ್ಲ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಎಚ್ಚರಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಲೋಕೋಪಯೋಗಿ, ಪಂಚಾಯತ್ ರಾಜ್, ಕೆಆರ್‌ಐಡಿಎಲ್, ಪಪಂ, ತಾಲೂಕು ಆರೋಗ್ಯಾಧಿಕಾರಿ ಸೇರಿ ನಾನಾ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ವಿಷಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಲಾ ಕೊಠಡಿಗಳ ರಿಪೇರಿ, ರಸ್ತೆ ಅಭಿವೃದ್ಧಿ, ಅಂಗನವಾಡಿ, ಆಸ್ಪತ್ರೆ ಕಟ್ಟಡಗಳ ಭೂಮಿಪೂಜೆಯನ್ನು ಶೀಘ್ರವೇ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಯೋಜನೆ ಹಾಕಿಕೊಂಡಿದ್ದು, ಅಧಿಕಾರಿಗಳು ಸಹ ಸಕ್ರಿಯವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪರವಾಗಿ ಮತ್ತು ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಮಲ್ಲಿಕಾರ್ಜುನ, ಪಿಡಬ್ಲ್ಯುಡಿ ಎಇಇ ಡಿ. ವೆಂಕಟರಮಣ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಪಿ. ಪ್ರದೀಪ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಶಾಲಾ ಕೊಠಡಿ ಉದ್ಘಾಟನೆ: ಸಭೆಯ ಬಳಿಕ ತಾಲೂಕಿನ ಬಡೇಲಡುಕು ಗ್ರಾಮದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ನಿರ್ಮಿಸಿರುವ ನೂತನ ಶಾಲಾ ಕೊಠಡಿಗಳನ್ನು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಉದ್ಘಾಟಿಸಿದರು. ಗ್ರಾಮಕ್ಕೆ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸ್ಥಳೀಯ ಮುಖಂಡರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸೂಕ್ತ ಜಾಗ ಪರಿಶೀಲಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಸತೀಶ್, ಪಿಡಿಒ ವಸಂತನಾಯ್ಕ, ಸದಸ್ಯರು, ಮುಖಂಡರು ಇದ್ದರು.