ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ರೈತರ ವಿಷಯದಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಇದು ರಾಜಕೀಯ ಮಾಡುವ ಸಮಯವಲ್ಲ. ರೈತರು ಪ್ರತಿ ಪಕ್ಷಕ್ಕೂ ಮತ ಹಾಕಿದ್ದು, ಅವರು ಸಂಕಷ್ಟದಲ್ಲಿರುವಾಗ ಅವರಿಗೆ ನ್ಯಾಯ ದೊರಕಿಸಿಕೊಡುವುದು ನನ್ನ ಉದ್ದೇಶ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಸ್ಥಳೀಯ ಎಮ್.ಎಸ್.ಪಾಟೀಲ ಅವರ ತೋಟದ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಸತತ ಮಳೆಯಿಂದ ತೊಗರಿ, ಹತ್ತಿ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆದರೆ, ಸಚಿವರು, ಶಾಸಕರು ರೈತರ ಜಮೀನಿಗೆ ಭೇಟಿ ನೀಡಿಲ್ಲ. ಈಗಲಾದರೂ ಶಾಸಕರು ಎಚ್ಚರಗೊಳ್ಳಬೇಕು ಎಂದರು.
ರೈತರ ಹಿತಕ್ಕಾಗಿ ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿಗಳು, ತಹಸೀಲ್ದಾರ್‌ರು ತಕ್ಷಣ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ನೀಡದಿದ್ದರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತೇವೆ ಎಂದು ಎಚ್ಚರಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ ನಾಡಗೌಡ ಮಾತನಾಡಿ, ರೈತರ ಸಂಕಷ್ಟವನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶಾಸಕರು ತಮ್ಮ ಪುತ್ರಿಯ ಹುಟ್ಟುಹಬ್ಬದ ಬಗ್ಗೆ ಮಾತನಾಡಿ ಹರಿಬಿಟ್ಟಿದ್ದಾರೆ. ಇದಕ್ಕೆ ಅವರಿಗೆ ಸಮಯವಿದೆ, ರೈತರ ಸಂಕಷ್ಟ ಕೇಳಲು ಸಮಯವಿಲ್ಲ. ಬೆಳೆ ನಾಶದಿಂದ ರೈತರು ಗ್ರಾಮ ಬಿಡುವ ಆತಂಕವಿದೆ ಎಂದರು.
ಬೆಳೆ ಸಮೀಕ್ಷೆ:ಮಾಜಿ ಶಾಸಕ ನಡಹಳ್ಳಿ ಭಾನುವಾರ ಆರೇಶಂಕರ, ನಾಗಬೇನಾಳ, ವೀರೇಶನಗರ ಹಾಗೂ ನಾಲತವಾಡ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಸಮೀಕ್ಷೆ ನಡೆಸಿದರು. ಅಲ್ಲದೇ,ಕುರಿಗಳನ್ನು ಕುರಿಗಾಯಿ ಕಳೆದುಕೊಂಡ ನಾಗಬೇನಾಳದ ಬಸವರಾಜ ಸುಲ್ತಾನಪೂರ ಅವರ ಮನೆಗೆ ಭೇಟಿ ನೀಡಿ ಪರಿಹಾರದ ಬಗ್ಗೆ ವಿಚಾರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಮುತ್ತು ಅಂಗಡಿ, ಎಮ್.ಎಸ್.ಪಾಟೀಲ, ಮುತ್ತು ಅಂಗಡಿ, ಜಗದೀಶ್ ಪಂಪಣ್ಣವರ, ಸಂಜು ಬಾಗೇವಾಡಿ, ಗಿರೀಶಗೌಡ ಬಿರಾದಾರ, ಸಂಗಮೇಶ ಗುಂಡಕನಾಳ, ಸಂಗಮೇಶ ಮೇಟಿ, ನಾಗೇಶ ಕವಡಿಮಟ್ಟಿ, ಶಶಿಧರ ಬಂಗಾರಿ, ಚಂದ್ರಶೇಖರ ಗಂಗನಗೌಡರ, ಬಸಣ್ಣ ವಡಗೇರಿ, ಬಾಬುಗೌಡ ಪಾಟೀಲ, ಚಂದ್ರು ಗಂಗನಗೌಡರ, ಈರಣ್ಣ ಮುದ್ನೂರ, ನವೀನಗೌಡ ಪಾಟೀಲ, ವೀರೇಶ ಚಲವಾದಿ, ಸಂಗಣ್ಣ ಕುಳಗೇರಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.