ಎಂಎಸ್‌ಪಿ ಕಾನೂನಿನ ಚೌಕಟ್ಟಿಗೆ ಒಳಪಡಿಸಲಿ: ಮಲ್ಲಿಕಾರ್ಜುನ ಬಳ್ಳಾರಿ

| Published : Feb 28 2024, 02:32 AM IST

ಸಾರಾಂಶ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ರೈತರ ಬೆಳೆಗೆ ಬೆಂಬಲ ಬೆಲೆ, ಬರಪರಿಹಾರ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಕಷ್ಟಪಟ್ಟು ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ಸಿಗದೇ ರಸ್ತೆ ಮಧ್ಯದಲ್ಲಿ ಬೆಳೆಗಳನ್ನು ನೆಲಕ್ಕೆ ಸುರಿದು ರೈತರು ಕಣ್ಣೀರಿಡುತ್ತಿದ್ದಾರೆ, ರೈತ ಮಾಡಿದ ವೆಚ್ಚಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಲ್ಲಿ ಅಂತಹ ರೈತರ ನೆರವಿಗೆ ಬರುವಂತಹ ಎಂಎಸ್‌ಪಿ ಕಾನೂನಿನ ಚೌಕಟ್ಟಿಗೆ ಒಳಪಡಿಸಲಿ ಎಂದರು.

ಸರ್ಕಾರ ನಿದ್ರಾವಸ್ಥೆಯಲ್ಲಿದೆ:

ಮುಖಂಡ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಎರಡೆರಡು ಬಾರಿ ರೈತರು ಬಿತ್ತನೆ ಮಾಡಿ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ, ಕಣ್ಣ ಮುಂದೆಯೇ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬರಪೀಡಿತ ಪ್ರದೇಶವೆಂದು ಘೋಷಣೆ ಬಳಿಕವೂ ಪರಿಹಾರ ನೀಡಲು ಮೀನ ಮೇಷ ಎಣಿಸುತ್ತಿರುವ ಉದ್ದೇಶವೇನು..? ಉಚಿತ ಕೊಡುಗೆ ನೀಡುವುದರಲ್ಲಿ ಮುಳುಗಿರುವ ಸರ್ಕಾರ ನಿದ್ರಾವಸ್ಥೆಗೆ ಜಾರಿದೆ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಮರೀಚಿಕೆ:

ಮುಖಂಡ ಗಂಗಣ್ಣ ಎಲಿ ಮಾತನಾಡಿ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಘೋಷಣೆ ಮಾಡುವಂತೆ ಕಳೆದ ಹಲವು ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ ಬ್ಯಾಂಕ್ ಮಾತ್ರ ಮಂಜೂರಾಗಿಲ್ಲ, ಬ್ಯಾಂಕ್‌ ಇಲ್ಲದೇ ಸರ್ಕಾರ ಘೋಷಣೆ ಮಾಡಿರುವ ₹5 ಲಕ್ಷ ಬಡ್ಡಿ ರಹಿತ ಸಾಲ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿ ಪುಣ್ಯ ಕಟ್ಟಿಕೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಜಾನ್‌ಪುನೀತ್, ಮಲ್ಲೇಶಪ್ಪ ಡಂಬಳ, ಶಂಕರ ಮರಗಾಲ, ಕೆ.ವಿ. ದೊಡ್ಡಗೌಡ್ರ, ಮಹದೇವಕ್ಕ, ಶಿವಮೂರ್ತಿ ಉಪ್ಪಾರ, ಪ್ರಕಾಶ ಸಿದ್ಧಪ್ಪನವರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಬರ ಪರಿಹಾರಕ್ಕೆ ಗಡುವು:

ರೈತರ ಖಾತೆಗೆ ₹ 2 ಸಾವಿರ ಹಾಕಿ ಕೈತೊಳೆದುಕೊಂಡಿರುವ ಸರ್ಕಾರ ಇನ್ನುಳಿದ ಪರಿಹಾರ ಹಣ ಇಂದಿಗೂ ಹಾಕಿಲ್ಲ, ಅವರು ಕೊಟ್ಟಂತಹ ಹಣ ಪಡೆದುಕೊಳ್ಳದೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮರಳಿಸಿದ್ದೇವೆ. ಇಷ್ಟಾದರೂ ಸಹ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ ಮಾ. 5ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.