ಕೆ.ಎಸ್.ನರಸಿಂಹಸ್ವಾಮಿ ಹೆಸರು ವಿಶ್ವ ಮಟ್ಟದಲ್ಲಿ ಹಬ್ಬಲಿ: ಎಚ್.ಟಿ.ಮಂಜು

| Published : Oct 30 2025, 01:30 AM IST

ಸಾರಾಂಶ

ತಾಲೂಕಿನಲ್ಲಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಂಸದರ ಅನುದಾನ ನೀಡಲು ಭರವಸೆ ನೀಡಿದ್ದಾರೆ. ದೊಡ್ಡ ಹೋಬಳಿ ಕೇಂದ್ರ ಕ್ರೀಡಾಪಟುಗಳು ಹೆಚ್ಚು ಇರುವ ಈ ಕಿಕ್ಕೇರಿ ಕೇಂದ್ರಕ್ಕೆ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಿಸಲು ಯತ್ನಿಸುವೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ನೆನಪು ಉಳಿಯಲು, ಹೆಸರು ವಿಶ್ವ ಮಟ್ಟದಲ್ಲಿ ಬೆಳಗಲು ಕೆಲಸ ಮಾಡುವುದಾಗಿ ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಬುಧವಾರ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಮೈಸೂರು ಆಕಾಶವಾಣಿ ಕೇಂದ್ರ, ಕರ್ನಾಟಕ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಕೆಎಸ್‌ನ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಕೆಎಸ್‌ನ ಟ್ರಸ್ಟ್ ಹಮ್ಮಿಕೊಂಡಿರುವ ಕೆ.ಎಸ್.ನರಸಿಂಹಸ್ವಾಮಿಯವರ ಸ್ವಾಗತ ಕಮಾನು, ಸ್ಮಾರಕ, ಬಯಲು ರಂಗ ಮಂದಿರದಂತಹ ಕೆಲಸ ಪರಿಪೂರ್ಣವಾಗುವಂತೆ, ನಿವೇಶನ ಮತ್ತಿತರ ಕೆಲಸಗಳಿಗೆ ಅಡ್ಡಿ ಆತಂಕವಿಲ್ಲದೆ ಜರುಗಲು ಮೊದಲಿಗನಾಗಿ ನಿಲ್ಲುವೆ ಎಂದರು.

ತಾಲೂಕಿನಲ್ಲಿ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಂಸದರ ಅನುದಾನ ನೀಡಲು ಭರವಸೆ ನೀಡಿದ್ದಾರೆ. ದೊಡ್ಡ ಹೋಬಳಿ ಕೇಂದ್ರ ಕ್ರೀಡಾಪಟುಗಳು ಹೆಚ್ಚು ಇರುವ ಈ ಕಿಕ್ಕೇರಿ ಕೇಂದ್ರಕ್ಕೆ ಖೇಲೋ ಇಂಡಿಯಾ ಕ್ರೀಡಾಂಗಣ ನಿರ್ಮಿಸಲು ಯತ್ನಿಸುವೆ ಎಂದರು.

ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಇದ್ದು, ಮತ್ತಷ್ಟು ಕ್ರೀಡಾಪಟುಗಳು ಕವಿ ಕೆಎಸ್‌ನ ಅವರಂತೆ ವಿಶ್ವ ಮಟ್ಟದಲ್ಲಿ ಬೆಳಗಬೇಕು. ಅದಕ್ಕಾಗಿ ಶ್ರಮಿಸುವುದಾಗಿ ಶಾಸಕರು ನುಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ಮಾತನಾಡಿ, ಪುತಿನ, ಕೆ.ಎಸ್‌ನ ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಕಿಕ್ಕೇರಿಯಲ್ಲಿ ಮೊದಲು ಬಯಲು ರಂಗಮಂದಿರ ಆಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕೆಎಸ್‌ನ ಕಾರ್ಯಕ್ರಮ ನಡೆಯಬೇಕು ಎಂದರು.

ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಟಿ.ಬಿ.ವಿದ್ಯಾಶಂಕರ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕೆ.ಎಸ್. ನ ಕುರಿತು ಕಾರ್ಯಕ್ರಮ ನಡೆದರೆ ಕನ್ನಡ ಭಾಷೆ, ಸಾಹಿತ್ಯ ಉಳಿಯಲಿದೆ. ಆಕಾಶವಾಣಿ ಕೇಂದ್ರಕ್ಕೆ ಕೆಎಸ್‌ನ ಜಾಗೃತಿ ಮೂಡಿಸುವ ಅವಕಾಶ ಕಲ್ಪಿಸಿಕೊಟ್ಟಿರುವ ಟ್ರಸ್ಟ್ ಒಳ್ಳೆಯ ಆಲೋಚನೆ ಇಟ್ಟುಕೊಂಡಿದೆ ಎಂದರು.

ಟ್ರಸ್ಟಿ ಸುರೇಶ್ ಮಾತನಾಡಿ, ಕೆ.ಎಸ್.ನ ನೆನಪು ಶಾಶ್ವತವಾಗಿರಲು ಮೊದಲು ಕೆಎಸ್.ನ ಸರೋವರ ಎಂದು ಕೆರೆಗೆ ನಾಮಕರಣ, ರಂಗಮಂದಿರ, ಸ್ವಾಗತ ಕಮಾನು ನಿರ್ಮಾಣವಾಗಬೇಕಿದೆ. ಇದು ಪ್ರವಾಸೋದ್ಯಮ ಕೇಂದ್ರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಟ್ರಸ್ಟ್‌ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಕೆ.ಎಸ್.ನ ಗೀತೆಗಳನ್ನು ಹಾಡುತ್ತಾ , ಕೆ.ಎಸ್.ನ ಹೆಸರು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುವಂತೆ ಅಮೆರಿಕಾ ಮತ್ತಿತರ ದೇಶಗಳಲ್ಲಿ ಕೆ.ಎಸ್.ನ ರಥಯಾತ್ರೆ, ಗೀತಗಾಯನ ಮಾಡಲಾಗಿದೆ. ನಮ್ಮೂರಿನ ಚೆಂದ ಹೆಚ್ಚಿಸಿದ ಮೈಸೂರು ಮಲ್ಲಿಗೆಯ ಕಂಪಿನ ಕವಿ ಕೆ.ಎಸ್.ನ ಕೆಲಸಗಳು ಮೊದಲು ಆಗಲು ಎಲ್ಲರ ಸಹಕಾರ ಬೇಕಿದೆ ಎಂದು ವಿನಂತಿಸಿದರು.

ಸಾಹಿತಿ ಎಸ್.ಬಿ.ಶಂಕರೇಗೌಡ ಕೆ.ಎಸ್.ನ. ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಿಕ್ಕೇರಿ ಕೆಪಿಎಸ್ ಶಾಲಾ ಕಾಲೇಜು ಮಕ್ಕಳು ಕೆಎಸ್‌ನ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರ ಮನಗೆದ್ದರು. ಗಾಯಕರಾದ ಕಿಕ್ಕೇರಿಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ, ಅಪ್ಪಗೆರೆ ತಿಮ್ಮರಾಜು, ಎ.ಡಿ.ಶ್ರೀನಿವಾಸ್. ಹಂಸಿನಿ, ಅಮೂಲ್ಯ, ನಾಗಮಂಗಲ ಶ್ರೀನಿವಾಸ ಮತ್ತಿತರರು ಗಾಯನದ ಮೂಲಕ ರಸದೌತಣ ಉಣ ಬಡಿಸಿದರು. ಕೆಎಸ್‌ನ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ, ಕೆಎಸ್‌ನ ಗೀತಗಾಯನ ಹಾಡಿದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಿಇಒ ವೈ.ಕೆ.ತಿಮ್ಮೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಟ್ರಸ್ಟಿ ಎ.ಸಿ.ಹಲಗೇಗೌಡ, ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಮಂಜುನಾಥ್, ಮುಖ್ಯಶಿಕ್ಷಕಿ ಮಮತಾ, ಎಪಿಎಂಸಿ ನಿರ್ದೇಶಕ ಮಧು, ಸಂಗೀತ ಶಿಕ್ಷಕ ವಿನಾಯಕ ಹೆಗ್ಗಡೆ, ಎನ್‌ಎಸ್‌ಎಸ್‌ ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಯೋಜನಾಧಿಕಾರಿ ಎಸ್.ಎಂ.ಬಸವರಾಜು, ಪುತಿನ ಟ್ರಸ್ಟ್ ಟ್ರಸ್ಟಿ ಕೆ.ಜೆ.ನಾರಾಯಣ, ಕಾಯಿ ಮಂಜೇಗೌಡ, ಶಿವರಾಮು, ಉಪನ್ಯಾಸಕ, ಶಿಕ್ಷಕ ವೃಂದದವರು ಹಾಜರಿದ್ದರು.