ನಂಜುಂಡಪ್ಪ ಆಯೋಗದ ವರದಿ ಜಾರಿಯಾಗಲಿ: ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತ ಈಟಿ

| Published : Feb 16 2025, 01:47 AM IST

ನಂಜುಂಡಪ್ಪ ಆಯೋಗದ ವರದಿ ಜಾರಿಯಾಗಲಿ: ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತ ಈಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶ ನಿರೀಕ್ಷೆಯಂತೆ ಅಭಿವೃದ್ಧಿ ಕಂಡಿಲ್ಲ. ಈ ನಿಟ್ಟಿನಲ್ಲಿ ಡಾ. ನಂಜುಂಡಪ್ಪ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಕಲ್ಯಾಣ ಕರ್ನಾಟಕ ಪ್ರದೇಶ ನಿರೀಕ್ಷೆಯಂತೆ ಅಭಿವೃದ್ಧಿ ಕಂಡಿಲ್ಲ. ಈ ನಿಟ್ಟಿನಲ್ಲಿ ಡಾ. ನಂಜುಂಡಪ್ಪ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಹನುಮಂತ ಈಟಿ ಒತ್ತಾಯಿಸಿದರು.

ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಜನನಿಬಿಡ ಪ್ರದೇಶಗಳಿಂದ ಕನಿಷ್ಠ ೧೦೦ ಮೀಟರ್ ನಂತರ ಪಟ್ಟಣ, ನಗರ ಪ್ರದೇಶಗಳ ಒಳಗೆ ಮದ್ಯದಂಗಡಿಗಳು ಇರಬಾರದೆಂದು ಉಚ್ಚನ್ಯಾಯಾಲಯ ತೀರ್ಪು ನೀಡಿದೆ. ಈ ಅಂಶ ಪರಿಪಾಲನೆಯಾಗಬೇಕಿದೆ. ಡಾ.ಸರೋಜಿನಿ ಮಹಿಷಿಯವರ ವರದಿಯಂತೆ ಬೇರೆ ಭಾಗಗಳಿಂದ ಬಂದು ದೊಡ್ಡ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿದ ಕಂಪನಿಗಳಲ್ಲಿ ಕನ್ನಡಿಗರನ್ನು ಮೂರು ಹಾಗೂ ನಾಲ್ಕು ದರ್ಜೆಯ ನೌಕರರಂತೆ ನೇಮಿಸಿಕೊಳ್ಳಲಾಗುತ್ತಿದೆ. ಆಯಕಟ್ಟಿನ ಉನ್ನತ ಹುದ್ದೆಗಳನ್ನು ನೀಡಲು ಸರ್ಕಾರ ಮುಂದಾಗಬೇಕು.

ದೇಶೀಯ ಹಾಗೂ ಆಧುನಿಕ ಕ್ರೀಡೆಗಳಲ್ಲಿ ಇಲ್ಲಿಯ ಮಕ್ಕಳು ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಪಡೆಯಲು ತರಬೇತಿಯ ಹಾಗೂ ಕ್ರೀಡಾಶಾಲೆ ಒಳಗೊಂಡ ವಿಶಾಲವಾದ ಕ್ರೀಡಾಂಗಣಗಳ ಅವಶ್ಯಕತೆ ಇದೆ. ಕ್ರೀಡಾ ಶಾಲೆಗಳನ್ನು ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ ಭಾಗದಲ್ಲಿ ಸರ್ಕಾರದಿಂದ ಮಂಜೂರ ಮಾಡುವುದು ಅವಶ್ಯವಾಗಿದೆ. ಸಂಚಾರಿ ವಾಹನಗಳ ವೇಗಮಿತಿಗಾಗಿ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಕುಷ್ಟಗಿ ಪಟ್ಟಣದ ಬಸವೇಶ್ವರ ವೃತ್ತ, ಮಾರುತಿ ವೃತ್ತ, ಬಸ್ ನಿಲ್ದಾಣ ಎದುರು, ಕನಕ ವೃತ್ತ ಗಳಲ್ಲಿ ಸಂಚಾರಿ ಸಿಗ್ನಲ್‌ಗಳನ್ನು ಅಳವಡಿಸುವ ಅವಶ್ಯಕತೆ ಇದೆ.

ತಾಲೂಕಿನ ದೊಡ್ಡ ಪಟ್ಟಣಗಳಾದ ಕುಷ್ಟಗಿ, ಹನುಮಸಾಗರ, ತಾವರಗೇರಾದಲ್ಲಿ ಅಲ್ಲಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕಿದೆ.

ಜನರು ಉದ್ಯೋಗ ಹುಡುಕಿ ದೂರದ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ನರೇಗಾ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ತಾಲೂಕಿನ ಕ್ಯಾದಿಗುಪ್ಪಾ ಪ್ರದೇಶದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳು ಆರಂಭಗೊಂಡು ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ರೈತರು ಬೆಳೆದ ಆಹಾರ ಧಾನ್ಯಗಳ ಬೆಲೆಯನ್ನು ವೈಜ್ಞಾನಿಕವಾಗಿ ಪ್ರಾರಂಭ ಹಂತದಲ್ಲಿಯೇ ನಿಗದಿಪಡಿಸುವುದು ಅವಶ್ಯವಾಗಿದೆ. ಆಹಾರಧಾನ್ಯ ಹಾಗೂ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಪೊಟ್ಟಣಗಳ ಮೇಲೆ ಕನ್ನಡದಲ್ಲಿಯೂ ವಿವರಣೆಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಬೇಕಾಗಿದೆ. ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯದ ಮಟ್ಟದವರೆಗೆ ಉಚಿತ ಶಿಕ್ಷಣ ನೀಡಬೇಕು. ಎಲ್ಲ ಕಡೆಗೂ ಕನ್ನಡ ಫಲಕ ಅಳವಡಿಸುವುದು ಹಾಗೂ ಕನ್ನಡ ಅಂಕಿ ಬಳಕೆ ಮಾಡುವುದು ಅವಶ್ಯವಾಗಿದೆ ಎಂದರು.