ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸಂಘಟಿತ ಷಡ್ಯಂತ್ರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವಹಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಹಾಸನ/ಬೆಳ್ತಂಗಡಿ

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸಂಘಟಿತ ಷಡ್ಯಂತ್ರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವಹಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಖಂಡಿಸಿ ಜೆಡಿಎಸ್‌ ಪಕ್ಷ ಭಾನುವಾರ ‘ಧರ್ಮಸ್ಥಳ ಸತ್ಯಯಾತ್ರೆ’ ಹಮ್ಮಿಕೊಂಡಿತ್ತು. ಇದರ ಅಂಗವಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವ ಬದಲು ಸರ್ಕಾರ ಷಡ್ಯಂತ್ರ ರೂಪಿಸಿದೆ. ನಾನು ಹಾಗೂ ನನ್ನ ಕುಟುಂಬದವರೆಲ್ಲರೂ ಧರ್ಮಸ್ಥಳದ ಪರಮಭಕ್ತರಾಗಿದ್ದು, ಪ್ರಕರಣದಲ್ಲಿ ಸತ್ಯವನ್ನು ಹೊರಗೆಳೆಯಲು ನೈತಿಕ ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ತಾಳ್ಮೆ, ಸಂಯಮ, ಸಮಾಧಾನ ಮತ್ತು ಮೌನವನ್ನು ಅವರು ಶ್ಲಾಘಿಸಿದರು. ಯಾವುದೇ ನಿರೀಕ್ಷೆ ಹಾಗೂ ಪ್ರತಿಫಲಾಪೇಕ್ಷೆ ಬಯಸದೆ, ಲೋಕಕಲ್ಯಾಣಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಚತುರ್ವಿಧ ದಾನಪರಂಪರೆಯೊಂದಿಗೆ ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಮೊದಲಾದ ಸಮಾಜಮುಖಿ ಸೇವಾಕಾರ್ಯಗಳಿಗಾಗಿ ಅವರನ್ನು ಅಭಿನಂದಿಸಿದರು.

ಧರ್ಮಸ್ಥಳದ ಪರವಾಗಿ ಹಮ್ಮಿಕೊಂಡಿರುವ ಸತ್ಯಯಾತ್ರೆಯಲ್ಲಿ ರಾಜಕೀಯ ಬಯಸುತ್ತಿಲ್ಲ. ಇದೊಂದು ಪಕ್ಷಾತೀತ ಕಾರ್ಯಕ್ರಮ. 700- 800 ವರ್ಷಗಳ ಇತಿಹಾಸವಿರುವ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೆಲೆಸಿರುವ ಪುಣ್ಯಸ್ಥಳಕ್ಕೆ ಭಕ್ತರು ದೇಶ- ವಿದೇಶಗಳಿಂದಲೂ ಬರುತ್ತಾರೆ. ಆದರೆ, ಕೆಲವೊಂದು ದುಷ್ಟಶಕ್ತಿ, ಸಮಾಜಘಾತುಕ ಶಕ್ತಿಗಳು ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿ ಗೊಂದಲ ಉಂಟು ಮಾಡಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ಸತ್ಯಯಾತ್ರೆ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಭಕ್ತರೇ ಕ್ಷೇತ್ರದ ಸಂಪತ್ತು: ಹೆಗ್ಗಡೆ

ಅಪವಾದಗಳು ಬಂದಾಗ ಅದನ್ನು ಎದುರಿಸಬೇಕು. ಕ್ಷೇತ್ರದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ‌ ಜವಾಬ್ದಾರಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ನಡೆದ ಜೆಡಿಎಸ್‌ನ ‘ಸತ್ಯಯಾತ್ರೆ’ಯ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶ-ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತಾದಿಗಳೇ ಧರ್ಮಸ್ಥಳದ ಅಪಾರ ಹಾಗೂ ಅಮೂಲ್ಯ ಸಂಪತ್ತು ಮತ್ತು ಶ್ರೀರಕ್ಷೆಯಾಗಿದೆ. ಇದರ ತೂಕ, ಘನತೆ, ಗೌರವವೇ ಅತಿ ಮಹತ್ವಪೂರ್ಣವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ನೆಲೆನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಇಲ್ಲಿ ಯಾವುದೇ ತಪ್ಪು ಅಥವಾ ಅಹಿತಕರ ಘಟನೆ ನಡೆಯದಂತೆ ಸದಾ ಎಚ್ಚರಿಕೆ ಹಾಗೂ ಮುಂಜಾಗರೂಕತೆ ವಹಿಸುತ್ತಿರುವುದಾಗಿ ಹೆಗ್ಗಡೆ ಸ್ಪಷ್ಟಪಡಿಸಿದರು.ಎಸ್‌ಐಟಿ ತನಿಖೆ ಪೂರ್ತಿಯಾಗಿಲ್ಲ. ಹೀಗಾಗಿ, ಬುರುಡೆ ಕೇಸ್‌ನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಬಹಳ‌ ಗೌರವವಿದೆ. ದೇವೇಗೌಡರಂತಹ ಮಹಾತ್ಮರನ್ನು ಸ್ಮರಿಸುತ್ತೇವೆ. ನಿಖಿಲ್, ಕ್ಷೇತ್ರದೊಂದಿಗೆ ನಾವಿದ್ದೇವೆ ಅಂದಿದ್ದಾರೆ. ಇಲ್ಲಿ ಬಂದು ಪ್ರೀತಿ ತೋರಿಸಿದ ನಿಮಗೆ ನಾನು ಅಭಾರಿ. ದೇವಸ್ಥಾನದ ಬಗ್ಗೆ ನಿಮ್ಮ ಪ್ರೀತಿ-ಗೌರವ ಹೀಗೆ ಇರಲಿ ಎಂದರು.