ಸಾರಾಂಶ
ಧರ್ಮಸ್ಥಳ ತೇಜೋವಧೆ ಖಂಡಿಸಿ ಕಾರ್ಕಳದಲ್ಲಿ ಬೃಹತ್ ಜನಾಗ್ರಹ ಸಭೆಕನ್ನಡಪ್ರಭ ವಾರ್ತೆ ಕಾರ್ಕಳ
ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ಮತ್ತು ದಬ್ಬಾಳಿಕೆಗೆ ಈಗ ಅಂತ್ಯ ಬರಬೇಕಾಗಿದೆ ಎಂದು ಎಸ್‌ಡಿಸಿಸಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ಕಾರ್ಕಳ ಕುಕ್ಕುಂದೂರು ಮೈದಾನದಲ್ಲಿ ಶ್ರೀ ಧರ್ಮಸ್ಥಳ ಅಭಿಮಾನಿ ವೇದಿಕೆ ವತಿಯಿಂದ ಬುಧವಾರ ಆಯೋಜಿಸಲಾದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.
ವಾಹನ ಜಾಥಾ:ಸೆ.14ರಂದು ಸುಮಾರು 3,500 ಸಹಕಾರಿ ಕ್ಷೇತ್ರದ ಧುರೀಣರೊಂದಿಗೆ ಧರ್ಮಸ್ಥಳಕ್ಕೆ ವಾಹನ ಜಾಥಾ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಕಾರ್ಕಳ ಜೈನ ಮಠದ ಲಲಿತ ಕೀರ್ತಿ ಪಟ್ಟವಚಾರ್ಯವರ್ಯ ಮಾತನಾಡಿ, ಧರ್ಮಸ್ಥಳವು 800 ವರ್ಷಗಳ ಐತಿಹಾಸಿಕ ಪಾರಂಪರ್ಯವನ್ನು ಹೊಂದಿದೆ. ಸರ್ವಧರ್ಮಗಳಿಗೆ ಸಾಕ್ಷಿಯಾಗಿ, ಸಹಬಾಳ್ವೆಯ ಪ್ರತೀಕವಾಗಿ ಧರ್ಮಸ್ಥಳ ಬೆಳಗುತ್ತಿದೆ. ಆದರೆ ಧಾರ್ಮಿಕ ಕ್ಷೇತ್ರಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ರಾಜಕೀಯದ ಪ್ರಭಾವವೂ ಇಲ್ಲಿ ಅಡಗಿದೆ. ಈ ಸಂದರ್ಭದಲ್ಲಿ ನಾವು ಧರ್ಮಸ್ಥಳದ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಎಂದರು.ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರವು ಒಂದು ಗುಂಪಿನಿಂದ ಸಿದ್ಧಪಡಿಸಲ್ಪಟ್ಟ ಕುತಂತ್ರವಾಗಿದೆ. ಇದು ನಂಬಿಕೆಯನ್ನು ಕುಂದಿಸಿ ಅರಾಜಕತೆಯನ್ನು ಸೃಷ್ಟಿಸುವ ಕೆಲಸವಾಗಿದೆ. ಜಾತಿ-ಜಾತಿಗಳ ನಡುವೆ ಜಗಳ ಹುಟ್ಟಿಸುವುದರೊಂದಿಗೆ ವಿದೇಶಿ ಶಕ್ತಿಗಳ ಪಿತೂರಿಯೂ ಇದಕ್ಕೆ ಕಾರಣವಾಗಿದೆ. ಹೀಗೆ ಭಾವನೆಗಳನ್ನು ದುರ್ಬಲಗೊಳಿಸಿ ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ನಾನು ಹಿಂದುತ್ವದ ಪರವಾಗಿ, ಸಂಸ್ಕೃತಿಯ ರಕ್ಷಣೆಯ ಪರವಾಗಿ ಧ್ವನಿ ಎತ್ತಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಸಜ್ಜನಿಕೆ ಬಿಟ್ಟು ರಸ್ತೆಗೆ ಇಳಿಯುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಹಾಗೂ ಸಂಸ್ಕೃತಿಯ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಕರೆ ನೀಡಿದರು.ಹೆಗ್ಗಡೆಯವರಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ:
ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ. ಇಲ್ಲಿ ಎಸ್‌ಐಟಿ ತನಿಖೆ ಮೂಲಕ ನೀಡುವ ಅಗತ್ಯವಿಲ್ಲ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸಮಾಜ ಬದಲಾವಣೆಗೆ ಪ್ರೇರೇಪಿಸುತ್ತಿವೆ. ಆದರೆ ಕೆಲ ಅರಾಜಕ ಶಕ್ತಿಗಳು ಅಪವಿತ್ರತೆ ಮತ್ತು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಕೆಲ ಸಂದರ್ಭಗಳಲ್ಲಿ ನಗರ ನಕ್ಸಲರ ಕೈಗೊಂಬೆಯಂತಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.ಸೋಲೂರು ಮಠದ ಶ್ರೀ ವಿಖ್ಯಾತಾನಾಂದ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧದ ನಿಮ್ಮ ಹೋರಾಟದಲ್ಲಿ ನಾವು ಸಹ ನಿಮ್ಮೊಂದಿಗಿದ್ದೇವೆ. ನಮ್ಮ ವೈಯಕ್ತಿಕ ಅಸ್ತಿತ್ವಕ್ಕೂ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಸಮಾಜವು ಬೇಗನೆ ಜಾಗೃತವಾಗಬೇಕು ಎಂದರು.
ಜಿತೇಂದ್ರ ಕುಂದೇಶ್ವರ, ವಸಂತ ಗಿಳಿಯಾರ್, ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು.ಕಾರ್ಯಕ್ರಮ ಸಂಘಟಕ ರವೀಂದ್ರ ಶೆಟ್ಟಿ ಬಜಗೋಳಿ, ಪ್ರಭೋದಾನಂದ ಮಹಾರಾಜ್, ಪ್ರಮುಖರಾದ ಬೋಳ ಪ್ರಭಾಕರ್ ಕಾಮತ್, ಎಂ.ಕೆ. ವಿಜಯ ಕುಮಾರ್, ಜನಜಾಗೃತಿ ವೇದಿಕೆಯ ನೀರೆ ಕೃಷ್ಣ ಶೆಟ್ಟಿ, ಭಾಸ್ಕರ ಕೋಟ್ಯಾನ್, ಶ್ಯಾಮಲಾ ಕುಂದರ್, ವಕೀಲರ ಸಂಘದ ಸುನೀಲ್ ಕುಮಾರ್, ಗಣಪತಿ ಹೆಗ್ಡೆ, ರಾಂ ಭಟ್ ಸಾಣೂರು, ಡಾ. ಸುಧಾಕರ್ ಶೆಟ್ಟಿ, ರವೀಶ್ ತಂತ್ರಿ ಕುಂಟಾರು, ಅಶ್ವಿನಿ, ಕಡಾರಿ ರವೀಂದ್ರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಸಂಚಾಲಕ ಉದಯಕುಮಾರ್ ಹೆಗ್ಡೆ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.