ಜನಪ್ರತಿನಿಧಿಗಳು ಜನಪರ ಕಾಳಜಿ ತೋರಲಿ: ಶಾಸಕ ಆರ್.ವಿ. ದೇಶಪಾಂಡೆ

| Published : Feb 15 2025, 12:32 AM IST

ಜನಪ್ರತಿನಿಧಿಗಳು ಜನಪರ ಕಾಳಜಿ ತೋರಲಿ: ಶಾಸಕ ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಭ್ರಷ್ಟಾಚಾರ, ಅವ್ಯವಹಾರಗಳಿಗೆ ಅವಕಾಶ ನೀಡದೇ ಪಟ್ಟಣದ ಅಭಿವೃದ್ಧಿಗೆ ದೂರಗಾಮಿ ಯೋಜನೆಗಳನ್ನು ರೂಪಿಸಿ, ಜನಮಾನಸದಲ್ಲಿ ಉಳಿಯುವಂಥ ಉತ್ತಮ ಜನಪರ ಕಾರ್ಯಗಳನ್ನು ಮಾಡಬೇಕು.

ಹಳಿಯಾಳ: ನನ್ನ ತಂದೆಯವರು ಹಳಿಯಾಳ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಂದು ಅನುದಾನವಿಲ್ಲದಿದ್ದರೂ ಪಟ್ಟಣದ ಅಭಿವೃದ್ಧಿಗೆ ಅವರು ತೋರುತ್ತಿದ್ದ ಕಾಳಜಿ ಅಪಾರವಾಗಿತ್ತು. ಅಂಥ ಜನಪರ ಕಾಳಜಿ ಈಗಿನ ಜನಪ್ರತಿನಿಧಿಗಳಲ್ಲಿ ಕಾಣುವುದು ಅಪರೂಪವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಪಟ್ಟಣದ ಪುರಭವನದಲ್ಲಿ ಪುರಸಭೆ ಹಾಗೂ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ಪುರಸಭೆಯ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಭ್ರಷ್ಟಾಚಾರ, ಅವ್ಯವಹಾರಗಳಿಗೆ ಅವಕಾಶ ನೀಡದೇ ಪಟ್ಟಣದ ಅಭಿವೃದ್ಧಿಗೆ ದೂರಗಾಮಿ ಯೋಜನೆಗಳನ್ನು ರೂಪಿಸಿ, ಜನಮಾನಸದಲ್ಲಿ ಉಳಿಯುವಂಥ ಉತ್ತಮ ಜನಪರ ಕಾರ್ಯಗಳನ್ನು ಮಾಡಬೇಕು ಎಂದರು.

ಪಟ್ಟಣದಲ್ಲಿ ವಸತಿರಹಿತರಿಗ ಸೂರನ್ನು ನೀಡಲು ಆರು ಎಕರೆ ಜಮೀನು ಮಂಜೂರು ಮಾಡಲಾಗಿದೆ. ನೈಜ ಬಡವರಿಗೆ, ಸ್ಥಳೀಯರಿಗೆ ವಸತಿರಹಿತರಿಗೆ ಆಶ್ರಯವನ್ನು ನೀಡಲು ಪುರಸಭಾ ಸದಸ್ಯರು ಪ್ರಯತ್ನಿಸಬೇಕು. ಆಡಳಿತ ನಿರ್ವಹಣೆಯ ವಿಷಯ ಬಂದಾಗ ಕೈ ಬಾಯಿ ಸ್ವಚ್ಛ ಇಟ್ಟುಕೊಂಡು ಉತ್ತಮ ನಿರ್ಣಯ ಕೈಗೊಳ್ಳಬೇಕು ಎಂದರು.

ಹಳಿಯಾಳದಲ್ಲಿ ಹೊಸ ವಸತಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಈ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ನೀರು, ವಿದ್ಯುತ್ ಹಾಗೂ ಇತರ ಮೂಲ ಸೌಲಭ್ಯಗಳನ್ನು ಒದಗಿಸದ ಹೊರತು ಪುರಸಭೆಯವರು ಅವರಿಗೆ ಪರವಾನಗಿ ನೀಡಬಾರದು. ವಸತಿ ಬಡಾವಣೆಯ ಪರವಾನಗಿ ವಿಷಯದಲ್ಲಿ ನಡೆದ ಹಲವಾರು ಅಕ್ರಮ ಭ್ರಷ್ಟಾಚಾರದ ವಿಷಯಗಳು ಕೇಳಿಬಂದಿದ್ದು, ಇದು ಪುನರಾವರ್ತನೆಯಾದರೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಚಾಲನೆ: ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಅಂದಾಜು ₹50 ಲಕ್ಷದಲ್ಲಿ ಖರೀದಿಸಿದ 5 ಕಸ ವಿಲೇವಾರಿ ಸ್ವಚ್ಛತಾ ವಾಹನಗಳನ್ನು ಲೋಕಾರ್ಪಣೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಹಳಿಯಾಳ ತಾಲೂಕಿನ 67 ಹಾಗೂ ದಾಂಡೇಲಿ ತಾಲೂಕಿನ 20 ಫಲಾನುಭವಿಗಳಿಗೆ ಗೌಂಡಿ ಕಿಟ್‌ಗಳನ್ನು ಎಂದು ಶಾಸಕ ಆರ್.ವಿ. ದೇಶಪಾಂಡೆ ಅವರು ವಿತರಿಸಿದರು.ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚವ್ಹಾಣ, ಹಿರಿಯ ಸದಸಯ ಅಜರ್ ಬಸರಿಕಟ್ಟಿ, ಫಯಾಜ ಶೇಖ್, ಸುವರ್ಣ ಮಾದರ, ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ರವಿ ತೋರಣಗಟ್ಟಿ, ಜಮೀಲಅಹ್ಮದ ಶಿವಳ್ಳಿ, ಸತ್ಯಜಿತ ಗಿರಿ, ಹನೋರಿಯಾ ಬೃಗಾಂಜಾ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಹೆಸ್ಕಾ ಎಇಇ ರವೀಂದ್ರ ಮೆಟಗುಡ್ಡ, ಹಳಿಯಾಳ ಕಾರ್ಮಿಕ ಅಧಿಕಾರಿ ಲಕ್ಷ್ಮೀಬಾಯಿ, ದಾಂಡೇಲಿ ಕಾರ್ಮಿಕ ಅಧಿಕಾರಿ ಚೇತನಕುಮಾರ, ಪುರಸಭಾ ವ್ಯವಸ್ಥಾಪಕ ಈರಣ್ಣ ಕೊಡ್ಲಿ ಇದ್ದರು.