ಸಾರಾಂಶ
ಬಿಟಿಡಿಎ ಸ್ಥಾಪನೆಯಾದ ನಂತರ ಇಲ್ಲಿಯವರೆಗೆ ಯಾವ ಸಂಘ-ಸಂಸ್ಥೆಗೆ ಎಷ್ಟೆಷ್ಟು ಜಾಗ ನೀಡಲಾಗಿದೆ? ಎಷ್ಟು ಅಕ್ರಮವಾಗಿ ನೀಡಲಾಗಿದೆ ಎಂಬುವುದರ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇಮಕ ಮಾಡಬೇಕೆಂದು ವೀರಣ್ಣ ಚರಂತಿಮಠ ಆಗ್ರಹಿಸಿದರು.
ಬಾಗಲಕೋಟೆ : ಬಿಟಿಡಿಎ ಸ್ಥಾಪನೆಯಾದ ನಂತರ ಇಲ್ಲಿಯವರೆಗೆ ಯಾವ ಸಂಘ-ಸಂಸ್ಥೆಗೆ ಎಷ್ಟೆಷ್ಟು ಜಾಗ ನೀಡಲಾಗಿದೆ? ಎಷ್ಟು ಅಕ್ರಮವಾಗಿ ನೀಡಲಾಗಿದೆ ಎಂಬುವುದರ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇಮಕ ಮಾಡಬೇಕೆಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಟಿಡಿಎ ಅಧ್ಯಕ್ಷರಾಗಿದ್ದಾಗ ಯಾವುದೇ ಕಾನೂನು ಬಾಹಿರ ಸೈಟ್‌ಗಳನ್ನು ನೀಡಿಲ್ಲ. ಎಲ್ಲ ವರ್ಗದವರಿಗೂ ಸೈಟ್‌ಗಳನ್ನು ಬಿಟಿಡಿಎ ನಿಯಮಾನುಸಾರ ನೀಡಲಾಗಿದೆ. ಯಾವುದೇ ಅವ್ಯವಹಾರ ಮಾಡಿಲ್ಲ. ಒಂದು ವೇಳೆ ನಿಯಮಬಾಹಿರ ಸೈಟ್‌ಗಳನ್ನು ನೀಡಿದರೆ ತನಿಖೆಯಾಗಲಿ ಎಂದರು.
13 ಜಾಗಕ್ಕೆ ಬಿಟಿಡಿಎಯಿಂದ 20 ಎಕರೆ ಜಾಗ:
ಬಿವಿವಿ ಸಂಘದ ಎಂ.ಬಿ. ಕಾಲೇಜು ಆವರಣದಲ್ಲಿ ನೀರಿನ ಟ್ಯಾಂಕ್, ರಸ್ತೆಗಾಗಿ ಹಾಗೂ ಮಹಾರಾಜ ಗಾರ್ಡನ್ ಬಳಿಯ ರಸ್ತೆ ಮಾಡುವಾಗ ಜಾಗವನ್ನು ನೀಡಿರುವುದು, ಇದಲ್ಲದೇ ನೇಗಿ ಶಾಲೆ, ಮೊಟಗಿ ಬಸವೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸೇರಿದ ಜಾಗ ಮುಳುಗಡೆಯಾಗಿದ್ದು ಸೇರಿ ಒಟ್ಟು ಬಿವಿವಿ ಸಂಘದ 13 ಜಾಗ ಕಳೆದುಕೊಂಡಿದ್ದಕ್ಕೆ ಬಿಟಿಡಿಎ 20 ಎಕರೆ ಜಾಗ ನೀಡಿದೆ. ಇದು ಎಷ್ಟು ಪಟ್ಟು ತೆಗೆದುಕೊಂಡಿದ್ದು ಎಂಬುದು ಲೆಕ್ಕ ಹಾಕಿ ಎಂದರು.
ಬಿವಿವಿ ಸಂಘದ ಮೇಲೇಕೆ ಕಣ್ಣು?:
ಅಂಜುಮನ್ ಸಂಸ್ಥೆಯ 1 ಎಕರೆ ಜಾಗ ಹೋದರೆ 15 ಎಕರೆ ಜಾಗವನ್ನು ಬಿಟಿಡಿಎದಿಂದ ಯಾರು ನೀಡಿದ್ದು? ಕಿಲ್ಲಾದ ಬಾಡಿಗೆ ಕಟ್ಟಡದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆಯ ಶಾಲೆಯನ್ನು ನಡೆಸಲಾಗಿತ್ತು. ಆದರೆ ಅದಕ್ಕೆ 11 ಎಕರೆ ಜಾಗವನ್ನು ಬಿಟಿಡಿಎದಿಂದ ನೀಡಲಾಗಿದೆ. ಇನ್ನು ವಿದ್ಯಾಪ್ರಸಾರಕ ಮಂಡಳದ ಸಂಸ್ಥೆಗೆ 3 ಎಕರೆ ಜಾಗವನ್ನು ನೀಡಲಾಗಿದೆ. ಆದರೆ ಈ ಸಂಸ್ಥೆಗಳಿಗೆ ಜಾಗವನ್ನು ನೀಡಿದ್ದಕ್ಕೆ ಯಾವುದೇ ನನ್ನ ತಕರಾರು ಇಲ್ಲ. ಆದರೆ ಯಾರಿಗೆ ಎಷ್ಟು ಜಾಗವನ್ನು ಬಿಟಿಡಿಎದಿಂದ ನೀಡಲಾಗಿದೆ ಎಂಬುವುದರ ಅರಿವು ಇರಬೇಕು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಮೇಲೆಯೇ ಯಾಕೆ ಕಣ್ಣು ಎಂದು ಪ್ರಶ್ನಿಸಿದರು.
ನಿಯಮಾನುಸಾರ ಜಾಗ:
ಬಿವಿವಿ ಸಂಘಕ್ಕೆ ನವನಗರದ ಸೆಕ್ಟರ್ ನಂ.59ರಲ್ಲಿ ಬಿಟಿಡಿಎದಿಂದ ನಿಯಮಾನುಸಾರ ಜಾಗವನ್ನು ನೀಡಿದೆ. ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ. ಹಂಚಿಕೆ ಆದೇಶದಂತೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ₹76,23,000 ಡಿಡಿಯನ್ನು ಭರಣಾ ಮಾಡಿ ಗುತ್ತಿಗೆ ಮತ್ತು ಕ್ರಯಪತ್ರವನ್ನು ನೋಂದಾಯಿಸಿ ಕಬ್ಜಾ ಪಾವತಿಯನ್ನು ಪಡೆಯಲಾಗಿದೆ ಎಂದು ಹೇಳಿದರು.
ಬಿವಿವಿ ಸಂಘದ ಮಾಲೀಕತ್ವದಲ್ಲಿನ ಎಂಬಿಎ ಕಾಲೇಜ ಹತ್ತಿರ ಕೂಡ ರಸ್ತೆ ಹಾಗೂ ಜಲ ಸಂಗ್ರಹಗಾರ ಸೇರಿದಂತೆ ಸಂಘದ ಒಟ್ಟು 4 ಎಕರೆ ಜಮೀನು ಪ್ರಾಧಿಕಾರದ ಸ್ವಾಧೀನದಲ್ಲಿದೆ. ಈ ಆಸ್ತಿಗೆ ಯಾವುದೇ ಪರಿಹಾರವನ್ನು ಪಡೆದುಕೊಂಡಿಲ್ಲ. ಮುಳುಗಡೆಯಾದ ಆಸ್ತಿ ಇದನ್ನು ಸೇರಿ ಬಿಟಿಡಿಎದಿಂದ ಜಾಗ ಪಡೆಯಲಾಗಿದೆ. ಸಾವಿರಾರು ಜನರಿಗೆ ಅನ್ನ ನೀಡುವ, ವಿದ್ಯಾದಾನ ನೀಡುವ ಸಂಸ್ಥೆಯ ಮೇಲೆಯೇ ಯಾಕೆ ಕಣ್ಣು. ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಈ ವಿಷಯವನ್ನು ಪದೇ ಪದೇ ಪ್ರತಿಪಾದಿಸುತ್ತಾ ಬಂದಿರುವುದು ಖೇದಕರ ಎಂದರು.
ಬಿವಿವಿ ಸಂಘಕ್ಕೆ ನೀಡಿರುವ ಜಾಗದಲ್ಲಿ ಯಾವುದೇ ಅಕ್ರಮವಿಲ್ಲ. ನಮ್ಮಸಂಸ್ಥೆಗೆ ನೀಡಿರುವ ಜಾಗದಲ್ಲಿ ಯಾವುದೇ ಅಕ್ರಮವಾಗಿಲ್ಲ. ಇದನ್ನು ರದ್ದು ಮಾಡುವ ಅಧಿಕಾರವಿಲ್ಲ. ನಮ್ಮಲ್ಲಿ ಎಲ್ಲ ದಾಖಲೆಗಳು ಇವೆ. ದಾಖಲೆ ಪ್ರಕಾರ ಹೋರಾಟ ಮಾಡುತ್ತೇವೆ. ಉಚ್ಚ ನ್ಯಾಯಾ ಲಯದ ಗಮನಕ್ಕೆ ದಾಖಲೆ ಸಮೇತ ತರುತ್ತೇವೆ. ನಮಗೆ ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎಂದು ಹೇಳಿದರು.
ಈ ವೇಳೆ ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ, ಬಿವ್ಹಿವ್ಹಿ ಸಂಘದ ಗೌರವ ಕಾರ್ಯ ದರ್ಶಿ ಮಹೇಶ ಅಥಣಿ ಪತ್ರಿಕಾಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))