ಪೊಲೀಸ್ ಸಿಬ್ಬಂದಿಯಲ್ಲಿ ಕರ್ತವ್ಯ ಪ್ರಜ್ಞೆ ಸದಾ ಕಾಲ ಜಾಗೃತವಾಗಿರಬೇಕು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಸೇವೆಗೆ ಲಭ್ಯರಿರಬೇಕು.

101 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ನಿರ್ಗಮನ ಪಥಸಂಚಲನದಲ್ಲಿ ಕವಾಯತು ಪರಿವೀಕ್ಷಣೆ

ಕನ್ನಡಪ್ರಭ ವಾರ್ತೆ ಕಾರವಾರ

ಪೊಲೀಸ್ ಸಿಬ್ಬಂದಿಯಲ್ಲಿ ಕರ್ತವ್ಯ ಪ್ರಜ್ಞೆ ಸದಾ ಕಾಲ ಜಾಗೃತವಾಗಿರಬೇಕು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಸೇವೆಗೆ ಲಭ್ಯರಿರಬೇಕು ಎಂದು ಡಿಐಜಿಪಿ (ತರಬೇತಿ) ಡಿ.ದೇವರಾಜ ಹೇಳಿದರು.

ಶುಕ್ರವಾರ ಕಾರವಾರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15ನೇ ತಂಡದಲ್ಲಿ 101 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ನಿರ್ಗಮನ ಪಥಸಂಚಲನದಲ್ಲಿ ಕವಾಯತು ಪರಿವೀಕ್ಷಣೆ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಇಲಾಖೆಗೆ ಹೆಚ್ಚಿನ ಸಂಖ್ಯೆಯ ಸ್ನಾತಕೋತ್ತರ ಪದವೀಧರರು, ಎಂಜಿನಿಯರ್‌ಗಳು, ಪದವೀಧರರು ನೇಮಕಗೊಳ್ಳುತ್ತಿದ್ದು, ನಿಮ್ಮ ಜ್ಞಾನವು ಇಲಾಖೆಗೆ ಸದ್ಬಳಕೆಯಾಗಲಿ ಎಂದ ಅವರು, ಯಾವುದೇ ಸಂದರ್ಭದಲ್ಲೂ ವೃತ್ತಿಪರತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಕೃಷ್ಣಮೂರ್ತಿ ಜಿ., ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ತರಬೇತಿಯಲ್ಲಿ ಹೊರಾಂಗಣದಲ್ಲಿ ಉತ್ತಮ ಸಾಧನೆ ತೋರಿದ, ದೋಂಟಿರಾಂ ಪರ್ಸೆ, ರಂಗನಾಥ್, ಶಿವರಾಜ್ ಹಾಗೂ ಒಳಾಂಗಣದಲ್ಲಿ ಉತ್ತಮ ಸಾಧನೆ ತೋರಿದ ಮುರಳಿ, ಅನಿಲ್ ಕುಮಾರ್, ಅನ್ವರ್‌ಸಾಬ್ ನದಾಫ್ ಮತ್ತು ಪೈರಿಂಗ್ ನಲ್ಲಿ ಉತ್ತಮ ಸಾಧನೆ ತೋರಿದ ಶಿವಪ್ಪ ದೇವರಮನಿ, ವೀರೇಶ್ ಮಡಿವಾಳ, ದೋಂಟಿರಾಂ ಪರ್ಸೆ ಅವರಿಗೆ ಬಹುಮಾನ ವಿತರಿಸಲಾಯಿತು. ತರಬೇತಿಯ ಸರ್ವೋತ್ತಮ ಪ್ರಶಸ್ತಿಯನ್ನು ದೋಂಟಿರಾಂ ಪರ್ಸೆ ಪಡೆದರು.