ಪೊಲೀಸರು ಆರೋಗ್ಯ ಕಾಳಜಿ ವಹಿಸಲಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

| Published : Dec 04 2024, 12:33 AM IST

ಪೊಲೀಸರು ಆರೋಗ್ಯ ಕಾಳಜಿ ವಹಿಸಲಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರಿಗೆ ಕ್ರೀಡಾ ಮನೋಭಾವ ಇದ್ದಲ್ಲಿ ಕರ್ತವ್ಯ ನಿರ್ವಹಣೆಗೆ ನೆರವಾಗಲಿದೆ. ಜಿಲ್ಲೆಯಲ್ಲಿ ಪೊಲೀಸರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಕಳೆದ ಬಾರಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಗರಿಷ್ಠ ಪ್ರಶಸ್ತಿಗಳು ಬಂದಿವೆ.

ಕಾರವಾರ: ಪ್ರತಿದಿನ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಒತ್ತಡ ನಿವಾರಣೆಯ ಕ್ರಮಗಳನ್ನು ಅಳವಡಿಸಿಕೊಂಡು ಅರೋಗ್ಯ ಮತ್ತು ಕುಟುಂಬದ ಕಡೆಯೂ ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪೊಲೀಸ್ ಸಿಬ್ಬಂದಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು. ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟು ಕುಟುಂಬದೊಂದಿಗೆ ಬೆರೆಯುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೂ ಅದನ್ನು ನಿಭಾಯಿಸಲು ಪೊಲೀಸರು ಸದಾ ಸಿದ್ಧರಿರುತ್ತಾರೆ. ಯಾವುದೇ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳು ನೀಡುವ ಆದೇಶಗಳನ್ನು ಯಥಾವತ್ತಾಗಿ ಪಾಲಿಸುವುದು ಅಗತ್ಯವಿದ್ದು, ಹಿರಿಯ ಅಧಿಕಾರಿಗಳು ನೀಡುವ ಎಲ್ಲ ಆದೇಶಗಳ ಹಿಂದೆ ಸಕಾರಣಗಳು ಮತ್ತು ಅದರದ್ದೇ ಆದ ಪ್ರಾಮುಖ್ಯತೆ ಇದ್ದು, ಅವುಗಳನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಂದ ಹಾಗೂ ಮತ್ತಿತರ ಕಡೆಗಳಿಂದ ಬರುವ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸುವುದನ್ನು ಅರಿಯಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ಮಾತನಾಡಿ, ಪೊಲೀಸರಿಗೆ ಕ್ರೀಡಾ ಮನೋಭಾವ ಇದ್ದಲ್ಲಿ ಕರ್ತವ್ಯ ನಿರ್ವಹಣೆಗೆ ನೆರವಾಗಲಿದೆ. ಜಿಲ್ಲೆಯಲ್ಲಿ ಪೊಲೀಸರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಕಳೆದ ಬಾರಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಗರಿಷ್ಠ ಪ್ರಶಸ್ತಿಗಳು ಬಂದಿವೆ. ಜಿಲ್ಲೆಯ ಪೊಲೀಸರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು.ಅರಗಾ ನೌಕಾನೆಲೆ ಕಮಾಂಡಿಂಗ್ ಆಫೀಸರ್ ಕ್ಯಾ. ವಿ.ಎಸ್. ಗುರು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್, ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ, ಕೈಗಾ ಅಣು ವಿದ್ಯುತ್ ಘಟಕದ ಸೈಟ್ ಡೈರೆಕ್ಟರ್ ವಿನೋದ್ ಕುಮಾರ್, ಕೊಂಕಣ ರೈಲ್ವೆಯ ಪ್ರಾದೇಶಿಕ ಮ್ಯಾನೇಜರ್ ಆಶಾ ಶೆಟ್ಟಿ, ಕೋಸ್ಟ್ ಗಾರ್ಡ್‌ ಕಮಾಂಡಿಂಗ್ ಆಫೀಸರ್ ಕಿರಣ್ ಕುಮಾರ್ ಸಿನ್ಹಾ, ಕದ್ರಾದ ಜಲಾಶಯ ಅಧೀಕ್ಷಕ ಎಂಜಿನಿಯರ್ ಶ್ರೀಧರ ಕೋರಿ, ಕೈಗಾ ಸಿಐಎಸ್‌ಎಫ್‌ನ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಇದ್ದರು.