ಸಾರಾಂಶ
ನವಲಗುಂದ: ಧಾರವಾಡ ಜಿಲ್ಲೆ ದೊಡ್ಡದಿದೆ. ಅದರಂತೆ, ಪೊಲೀಸ್ ವ್ಯವಸ್ಥೆ ಬಗ್ಗೆ ಜನರ ನಿರೀಕ್ಷೆಗಳೂ ಹೆಚ್ಚಿವೆ. ಪೊಲೀಸ್ ಠಾಣೆಗೆ ಬರುವ ಯಾರೇ ಆಗಲಿ ದುಃಖದಲ್ಲಿ ಇರುತ್ತಾರೆ. ಆ ಸಮಯದಲ್ಲಿ ಅವರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಸಾಧ್ಯವಿಲ್ಲ. ಆದರೆ, ನಾವು ಅವರ ನೋವು ಅರ್ಥ ಮಾಡಿಕೊಂಡು ಸ್ಪಂದಿಸಿದರೆ ಅದೇ ಅವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.
ಪಟ್ಟಣದಲ್ಲಿಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೆ ಮಾತನಾಡಿದರು. ಪೊಲೀಸ್ ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಆಸೆ ಇದೆ ಎಂದು ತಿಳಿಸಿದರು.ಈ ಹಿಂದೆ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಉತ್ತಮ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಹಿಂದಿನವರ ಒಳ್ಳೆ ಕೆಲಸಗಳನ್ನು ಮುಂದುವರಿಸುವುದರ ಜತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತಮ ಕೆಲಸ ಮಾಡುವ ಗುರಿ ಇದೆ ಎಂದರು.
ಇಂದು ಅಧಿಕಾರಿಗಳ ಜತೆಗೆ ಸಭೆ ನಡೆಸಿ, ನನ್ನ ಯೋಜನೆಗಳ ಬಗ್ಗೆ ತಿಳಿಸಿರುವೆ. ಅವರ ಮಾತುಗಳನ್ನೂ ಕೇಳಿಸಿಕೊಂಡಿರುವೆ. ಸಣ್ಣಪುಟ್ಟ ದೂರುಗಳನ್ನೂ ಮುತುವರ್ಜಿಯಿಂದ ಗಮನಿಸಲಾಗುವುದು ಎಂದರು.ಸಣ್ಣ ಪುಟ್ಟ ಜಗಳ ಹೊರತು ಪಡಿಸಿ ಬೇರೆ ಪ್ರಕರಣಗಳಲ್ಲಿ ರಾಜಿ ಸಂಧಾನದಲ್ಲಿ ನನಗೆ ನಂಬಿಕೆ ಇಲ್ಲ.ನಿಯಮಿತವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಲಾಗುವುದು. ಬೀಟ್ ಬಲಪಡಿಸುವುದು, ಕಳವು ಪ್ರಕರಣಗಳಲ್ಲಿ ರಿಕವರಿ, ಸೈಬರ್ ಕ್ರೈಂ ಕುರಿತು ಜನಜಾಗೃತಿ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಠಾಣೆಗೆ ಭೇಟಿ ನೀಡಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಕಾನೂನು ರೀತಿ ಪರಿಹರಿಸುವ ಸಂಬಂಧ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಿಕ್ಷಣಕಾಶಿ ಧಾರವಾಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಎಸ್ಪಿ ಗುಂಜನ್ ಆರ್ಯ ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಜನಾರ್ಧನ ಭಟ್ರಳ್ಳಿ ಸೇರಿದಂತೆ ಠಾಣೆಯ ಸಿಬ್ಬಂದಿ ಹಾಜರಿದ್ದರು.