ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಲಿ

| Published : Nov 11 2024, 12:48 AM IST

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆ: ಸರ್ಕಾರವು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಜಿ ಹಾಕುವಂತಹ ಪದ್ಧತಿಯನ್ನು ಸರ್ಕಾರ ನಿಲ್ಲಿಸಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಒತ್ತಾಯಿಸಿದರು.

ಸಿರಿಗೆರೆ: ಸರ್ಕಾರವು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಜಿ ಹಾಕುವಂತಹ ಪದ್ಧತಿಯನ್ನು ಸರ್ಕಾರ ನಿಲ್ಲಿಸಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಒತ್ತಾಯಿಸಿದರು.ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಡೆಯುತ್ತಿರುವ ತರಳಬಾಳು ನುಡಿಹಬ್ಬದ ಮಹಿಳೆ ಮತ್ತು ಯುವಜನತೆ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದ ಅವರು, ಈ ಪದ್ಧತಿಯನ್ನು ಬರಹಗಾರರು, ಸಾಹಿತಿಗಳು ವಿರೋಧಿಸಬೇಕು ಎಂದರು.ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವುದು ಅವಮಾನಕರವಾದುದು. ಸಾಹಿತ್ಯ, ಕಲೆ, ಸಂಗೀತ, ಸಾಮಾಜಿಕ ಕ್ಷೇತ್ರಗಳಲ್ಲಿನ ಅನುಭವಿಗಳನ್ನು ಒಳಗೊಂಡ ಸಮಿತಿಯೊಂದನ್ನು ಸರ್ಕಾರ ನೇಮಕ ಮಾಡಬೇಕು. ಆ ಸಮಿತಿ ಹಲವು ಮಾನದಂಡಗಳನ್ನು ಅನುಸರಿಸಿ ಶಿಫಾಸ್ಸು ಮಾಡುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಬೇಕು. ಸ್ಥಾನಮಾನಗಳು ಸಾಧನೆ ಮಾಡಿರುವವರಿಗೆ ಸಿಗಬೇಕು. ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ಪದ್ಧತಿ ಈ ವರ್ಷಕ್ಕೇ ಕೊನೆಗೊಳ್ಳಲಿ ಎಂದು ಹೇಳಿದರು.ಜಗತ್ತಿನಾದ್ಯಂತ ಹಿಂಸೆ ಮತ್ತು ಕ್ರೌರ್ಯಗಳು ತುಂಬಿತುಳುಕಾಡುತ್ತಿವೆ. ಜಗತ್ತಿನ ಹಲವು ದೇಶಗಳಲ್ಲಿ ಯುದ್ಧಗಳು ನಡೆಯುತ್ತಿವೆ. ಮನುಷ್ಯ ಮನುಷ್ಯನನ್ನೇ ಕೊಂದು ತಿನ್ನುವಂತ ಕೆಟ್ಟ ಸ್ಥಿತಿ ಜಗತ್ತಿನಲ್ಲಿದೆ. ಇದನ್ನು ನಿವಾರಿಸಲು ಬಸವಾದಿ ಶಿವಶರಣರ ಚಿಂತನೆಗಳು ಪೂರಕವಾಗಿವೆ ಎಂದು ತಿಳಿಸಿದರು.ಮಹಿಳೆಯರಿಗೆ ರಕ್ಷಣೆ ಸಿಗಬೇಕಾದುದು ಅಗತ್ಯವಾಗಿದೆ. ೪೦ ವರ್ಷಗಳಷ್ಟೇ ಹಿಂದೆ ರೂಪುಗೊಂಡಿರುವ ದುಬೈನಲ್ಲಿ ಮಹಿಳೆಯರಿಗೆ ಸಾಮಾಜಿ ಭದ್ರತೆ ಇದೆ. ಅಲ್ಲಿ ತಡವಾಗಿ ಮನೆ ಸೇರುವ ಮಹಿಳೆಯರ ಬಗ್ಗೆ ಆತಂಕವಿಲ್ಲ. ಆದರೆ ಅಂತಹ ಸ್ಥಿತಿ ಭಾರತದಲ್ಲಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಹೊಸನಗರ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ತರಳಬಾಳು ಶ್ರೀಗಳು ಮೊಬೈಲ್‌ ಆಪ್‌ ಮೂಲಕ ಬಸವಣ್ಣನವರ ಸಾಹಿತ್ಯ, ಸರ್ವಜ್ಞ ಮತ್ತು ಡಿವಿಜಿ ಸಾಹಿತ್ಯವನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ದೇಶದಲ್ಲಿಯೇ ವಿನೂತನವಾದುದು. ಈವರೆಗೆ ಇಂತಹ ಕೆಲಸವನ್ನು ದೇಶದಲ್ಲಿ ಯಾರೂ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆಯ ಉಪನ್ಯಾಸಕಿ ಡಾ.ಗೀತಾ ಬಸವರಾಜ್‌ ಮಾತನಾಡಿ, ಬಸವಾದಿ ಶಿವಶರಣ ಕಾಲದಿಂದ ಮಹಿಳೆಗೆ ಸಮಾಜದಲ್ಲಿ ಸಮಾನತೆ ಬಂದಿದೆ. ವಿಜ್ಞಾನ, ಇಂಜಿನಿಯರಿಂಗ್‌, ವೈದ್ಯ, ಆಡಳಿತ, ಬಾಹ್ಯಾಕಾಶ ವಿಭಾಗದಲ್ಲಿಯೂ ಮಹಿಳೆ ಸಾಧನೆ ಮಾಡಿದ್ದಾಳೆ. ಆದರೆ ನಿಜಕ್ಕೂ ಇಂದಿಗೂ ಆಕೆಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎನ್ನುವ ಪ್ರಶ್ನೆ ಇದೆ ಎಂದರು.

ಆಧುನಿಕ ಕಾಲಗಟ್ಟದಲ್ಲಿ ಮಹಿಳೆಯ ಪಾತ್ರ ದೊಡ್ಡದಾಗಿದೆ. ಮಹಿಳೆ ಹಲವು ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈ ಎಲ್ಲಾ ಸಾಧನೆಯ ಹಿಂದೆ ಆಕೆ ಅನುಭವಿಸಿದ ನೋವೂ ಇದೆ ಎಂದರು.ವಿಜಯಪುರದ ಶಿಕ್ಷಕ ಅಶೋಕ್‌.ಎಸ್.‌ ಹಂಚಲಿ, ಉಡುಪಿಯ ಸಂಧ್ಯಾ ಶೆಣೈ ಮಾತನಾಡಿದರು.

ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕವಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಅವರನ್ನು ತರಳಬಾಳು ಶ್ರೀಗಳು ಅಭಿನಂದಿಸಿ ಸತ್ಕರಿಸಿದರು.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್.ಎಲ್.‌ಮಲ್ಲೇಶಗೌಡ, ಬಳ್ಳಾರಿ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಚಿಕ್ಕಮಗಳೂರು ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್‌ ಇದ್ದರು.