ಯೋಗವು ಇಂದಿನ ದೈನಂದಿನ ಬದುಕಿಗೆ ಅತ್ಯಾವಶ್ಯಕವಾಗಿದ್ದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ: ಯೋಗವು ಇಂದಿನ ದೈನಂದಿನ ಬದುಕಿಗೆ ಅತ್ಯಾವಶ್ಯಕವಾಗಿದ್ದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ರಜನಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯೋಗವು ಪ್ರಾಚೀನ ಭಾರತದ ಅಮೂಲ್ಯ ಪರಂಪರೆ ಹಾಗೂ ಜೀವನ ಕೌಶಲ್ಯವಾಗಿದ್ದು, ಆದಿಕಾಲದ ಪತಂಜಲಿ ಮಹರ್ಷಿಗಳು ಯೋಗದ ಸಂಸ್ಥಾಪಕರು ಮತ್ತು ಪಿತಾಮಹರಾಗಿದ್ದಾರೆ. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯ ಎಷ್ಟು ಮುಖ್ಯವೋ, ಮನಸ್ಸು ಸಹ ಅಷ್ಟೇ ಮುಖ್ಯವಾಗುತ್ತದೆ. ದೇಹ ಸದೃಢವಾಗಿದ್ದರೂ ಮನಸ್ಸು ಆರೋಗ್ಯಕರವಾಗಿರದಿದ್ದರೆ ವ್ಯಕ್ತಿ ಮಾನಸಿಕವಾಗಿ ದೃಢವಾಗಲು ಸಾಧ್ಯವಿಲ್ಲ. ಈ ಕಾರಣದಿಂದ ಯೋಗ ಅತ್ಯಂತ ಅವಶ್ಯಕವಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ ಮತ್ತು ಮನಸ್ಸಿನ್ನು ಒಂದುಗೂಡಿಸುವ ಮಾರ್ಗವಾಗಿದೆ ಎಂದರು.
ಪತಂಜಲಿ ಮಹರ್ಷಿಗಳು ಆತ್ಮಸಾಧನೆಗಾಗಿ ಅಷ್ಟಾಂಗ ಯೋಗವನ್ನು ಪ್ರತಿಪಾದಿಸಿದ್ದು, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಎಂಬ ಎಂಟು ಅಂಗಗಳ ಮೂಲಕ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದವು ಎಂದು ವಿವರಿಸಿದರು.ವ್ಯಾಯಾಮವು ನೈತಿಕ ಶಿಸ್ತುಗಳನ್ನು, ನಿಯಮವು ಸಕಾರಾತ್ಮಕ ಚಿಂತನೆ ಮತ್ತು ಸ್ವಯಂ ಶಿಸ್ತನ್ನು ಪ್ರತಿಪಾದಿಸುತ್ತದೆ. ಆಸನಗಳು ದೇಹದ ನರಮಂಡಲದ ಮೇಲೆ ಉತ್ತಮ ಪ್ರಭಾವ ಬೀರಿ ಮಾನಸಿಕ ಏಕಾಗ್ರತೆಯನ್ನು ವೃದ್ಧಿಸುತ್ತವೆ. ಪ್ರಾಣಾಯಾಮವು ಉಸಿರಾಟ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
2022ರಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅದೇ ರೀತಿ ಕರ್ನಾಟಕದಲ್ಲಿ ಆಯೋಜಿಸಲಾದ `ಯೋಗಥಾನ್'''' ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಯೋಗ ಶಿಕ್ಷಕರು ಹಾಗೂ 5 ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜಿತ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ಎಲ್. ನಾಗರಾಜ್, ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಸಿ.ಜಿ. ನಿಡಗುಂದಿ, ಡಿಡಿಪಿಐ ಮೋಹನ ದಂಡಿನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಎಚ್. ಲತಾ ಭಾಗವಹಿಸಿದ್ದರು.ಭಾರತದ ಸಂಸ್ಕೃತಿ ಭಾಗವಾಗಿರುವ ಯೋಗವನ್ನು ವಿಶ್ವದಾದ್ಯಂತ ಪರಿಚಯಿಸುವ ಉದ್ದೇಶದಿಂದ 2014ರಲ್ಲಿ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದ ನಿರ್ಣಯ ಮಂಡಿಸಿದ್ದರು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 175 ರಾಷ್ಟ್ರಗಳು ಯಾವುದೇ ವಿರೋಧವಿಲ್ಲದೆ ಆ ನಿರ್ಣಯವನ್ನು ಬೆಂಬಲಿಸಿದ್ದವು. ಇದು ಯೋಗದ ಮಹತ್ವವನ್ನು ವಿಶ್ವವೇ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.