ಅಹಿಂಸಾ ತತ್ವ ಬದುಕಿನ ಆದರ್ಶವಾಗಲಿ

| Published : Apr 11 2025, 12:32 AM IST

ಸಾರಾಂಶ

ಅಥಣಿ ಪಟ್ಟಣದಲ್ಲಿ ವರ್ಧಮಾನ ಮಹಾವೀರರ ಜಯಂತಿ ಅಂಗವಾಗಿ ಮಹಾವೀರ ತೀರ್ಥಂಕರ ಪಲ್ಲಕ್ಕಿ ಹಾಗೂ ಭಾವಚಿತ್ರದ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಅಥಣಿ

ಅಹಿಂಸಾ ಪರಮೋಧರ್ಮ ಎಂದು ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಭಗವಾನ ಮಹಾವೀರ ತೀರ್ಥಂಕರ ತತ್ವ, ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಮಹಾವೀರರ ಅಹಿಂಸೆ, ಸತ್ಯ, ಶಾಂತಿ ಮತ್ತು ಮಾನವೀಯತೆ ನಮ್ಮ ಬದುಕಿನ ಆದರ್ಶಗಳಾಗಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಪಟ್ಟಣದಲ್ಲಿ ಜೈನ ಸಮಾಜ ಹಾಗೂ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಾವೀರರು ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗದೇ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸಾ ಮಾರ್ಗ ಅನುಸರಿಸುವಂತೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ.

ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ದೇಶದಲ್ಲಿ ಅನೇಕ ಮಹಾಪುರುಷರು ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸಿದ್ದಾರೆ. ಮಹಾವೀರರು ನೀಡಿದ ತತ್ವ ಆದರ್ಶಗಳು ಎಲ್ಲ ಧರ್ಮಿಯರಿಗೂ ಆದರ್ಶವಾಗಿವೆ. ಆದರೆ, ಇಂದು ಅವರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಸಂಕುಚಿತ ಸ್ವಭಾವ ದೂರಾಗಬೇಕು ಎಂದು ತಿಳಿಸಿದರು.

ಅಥಣಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಹಾವೀರರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮಹಾವೀರರು ಹಾಕಿಕೊಟ್ಟ ಜೀವನಾದರ್ಶ ಇಂದಿಗೂ ಪ್ರಸ್ತುವಾಗಿದೆ. 2500 ವರ್ಷಗಳ ಹಿಂದೆ ಅನೇಕ ಸಮಸ್ಯೆಗಳನ್ನು ಎದುರಿಸಿಯೂ ವಿಶ್ವಕ್ಕೆ ಶಾಂತಿ ಬೋಧಿಸಿದ ಮಹಾವೀರರು ಮೋಕ್ಷ ಮಾರ್ಗದೆಡೆ ಸಾಗಲು ಅಹಿಂಸೆಯೇ ಮೂಲಮಂತ್ರ ಎಂದು ಬೋಧಿಸಿದ್ದಾರೆ ಎಂದು ವಿವರಿಸಿದರು.

ತಾಲೂಕು ತಹಸೀಲ್ದಾರ್‌ ಸಿದ್ದರಾಯ ಬೋಸಗಿ ಮಾತನಾಡಿ, ಸಕಲ ಜೀವಿಗಳನ್ನು ಸಮಾನತೆಯಲ್ಲಿ ಕಂಡು ನೀನು ಬದುಕು, ಇತರರನ್ನು ಬದುಕಲು ಬಿಡು ಎಂಬ ದಿವ್ಯ ಸಂದೇಶವನ್ನು ನೀಡಿ ಜಗತ್ತಿಗೆ ಬೆಳಕಾದವರು ಮಹಾವೀರರು. ಜೈನ ಧರ್ಮದ ಇತಿಹಾಸವನ್ನು ಶ್ರೀಮಂತ ಮತ್ತು ವಿಸ್ತಾರ ಗೊಳಿಸಿದ ಕೊನೆಯ ತೀರ್ಥಂಕರು. ನಮ್ಮ ಕರ್ನಾಟಕ ರಾಜ್ಯದಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರಗಳಿದ್ದು, ರಾಜ್ಯದ ಸಂಸ್ಕೃತಿ, ವಾಸ್ತು ಶಿಲ್ಪ, ಸಾಹಿತ್ಯದ ಮೇಲೆ ಜೈನ ಧರ್ಮ ಪ್ರಭಾವ ಬೀರಿದೆ ಎಂದರು.

ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣ ಯಲಗುದ್ರಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಯುವ ಮುಖಂಡ ಚಿದಾನಂದ ಸವದಿ, ಬಿಜೆಪಿ ಮುಖಂಡ ಧರೇಪ್ಪ ಠಕ್ಕಣ್ಣವರ, ಪುರಸಭೆ ಸದಸ್ಯ ರಾವಸಾಬ್‌ ಐಹೊಳೆ, ಹಿರಿಯ ನ್ಯಾಯವಾದಿ ಹಾಗೂ ಜೈನ ಸಮಾಜದ ಮುಖಂಡ ಕಲ್ಲಪ್ಪ ವಣಜೋಳ, ಎಲ್.ಡಿ.ಹಳಿಂಗಳಿ, ಸಂತೋಷ ಬೊಮ್ಮಣ್ಣವರ, ಅಮರ ದುರ್ಗಣ್ಣವರ, ಪಾರಿಸ್ ನಂದೇಪ್ಪನವರ, ಅಭಯ ಕೊಪ್ಪ, ಡಿ.ಡಿ.ಮೇಕನಮರಡಿ, ಅಶೋಕ ಪಡನಾಡ, ರಾಜು ಕರ್ಪೂರಶೆಟ್ಟಿ, ಅಶೋಕ ದಾನಗೌಡರ ಸೇರಿ ಸಮಾಜ ಮುಖಂಡರು ಪಾಲ್ಗೊಂಡಿದ್ದರು.ಸಂಭ್ರಮದ ಶೋಭಾಯಾತ್ರೆ

ಪಟ್ಟಣದಲ್ಲಿ ಸಮಸ್ತ ಅಥಣಿ ಜೈನ ಸಮಾಜ ಹಾಗೂ ತಾಲೂಕು ಆಡಳಿತದಿಂದ ಮಹಾವೀರ ತೀರ್ಥಂಕರ ಪಲ್ಲಕ್ಕಿ ಉತ್ಸವ ಹಾಗೂ ಶೋಭಾಯಾತ್ರೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಪೇಟೆಯಲ್ಲಿರುವ ಜೈನ ಬಸದಿಯಿಂದ ಆರಂಭವಾದ ಮೆರವಣಿಗೆಯಲ್ಲಿ ತಹಸೀಲ್ದಾರ್ ಸಿದ್ದರಾಯ ಬೋಸಗಿ, ಪುರಸಭೆ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಶ್ರಾವಕಿಯರು ಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಮುಖ್ಯ ಬೀದಿಯ ಮೂಲಕ ಡಾ.ಅಂಬೇಡ್ಕರ್ ವೃತ್ತ, ವೀರರಾಣಿ ಚನ್ನಮ್ಮ ವೃತ್ತ, ಶಿವಯೋಗಿ ವೃತ್ತದ ಮೂಲಕ ತರಕಾರಿ ಮಾರುಕಟ್ಟೆಯಲ್ಲಿರುವ ಹಾಸ್ಟೆಲ್ ಬಸದಿಯಲ್ಲಿ ಸಮಾರೋಪಗೊಂಡಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.