ರಾಮಮಂದಿರದಿಂದ ಹೊರಟ ಮೆರವಣಿಗೆ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಶ್ರೀ ರಾಮ ದೇವಾಲಯದ ಬಳಿ ಅಂತ್ಯಗೊಂಡಿತು. ಮೆರವಣಿಗೆ ಬಳಿಕ ಶ್ರೀರಾಮ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭರತನಾಟ್ಯ, ಭಕ್ತಿಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ರಾಮನಗರ
ವಿಪ್ರ ಸಮಾಜವು ಸಂಘಟನೆಯ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದು, ಸಂಘಟನೆ ಮೂಲಕ ಅದನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಅಧ್ಯಕ್ಷ ಎಸ್.ರಘುನಾಥ್ ಕಿವಿಮಾತು ಹೇಳಿದರು.ನಗರದ ಛತ್ರದ ಬೀದಿಯಲ್ಲಿರುವ ಶ್ರೀ ಸೀತಾರಾಮ ಭಜನಾಮಂದಿರದಲ್ಲಿ ನಡೆದ ರಾಮನಗರ ತಾಲೂಕು ವಿಪ್ರ ಯುವ ಟ್ರಸ್ಟ್ ನ 20ನೇ ವಾರ್ಷಿಕೋತ್ಸವ ಹಾಗೂ 13ನೇ ವರ್ಷದ ಶ್ರೀ ಹನುಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವಿಪ್ರ ಸಂಘಟನೆಗಳು ಸಮಾಜಮುಖಿಯಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದಾಗ ಮಾತ್ರ ವಿಪ್ರರ ಏಳಿಗೆ ಸಾಧ್ಯ ಎಂದರು.
ವಿಪ್ರ ಸಮಾಜದ ಬಂಧುಗಳು ಒಗ್ಗಟ್ಟಾಗಬೇಕಿದೆ. ಹೀಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸದಸ್ಯತ್ವ ಹೆಚ್ಚಿಸಲು ಚಿಂತಿಸಲಾಗಿದೆ. ಸಮಾಜದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಆರೋಗ್ಯ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ ಎಂದ ಅವರು, ರಾಮನಗರ ವಿಪ್ರ ಯುವ ಸೇವಾ ಟ್ರಸ್ಟ್ ಕಳೆದ 20 ವರ್ಷಗಳಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದರು.ವಿಜೃಂಭಣೆಯ ಹನುಮ ಜಯಂತಿ:ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ ಶ್ರೀರಾಮಚಂದ್ರನ ಪರಮ ಭಕ್ತನಾದ ಹನುಮನ ಜಯಂತಿ ಆಚರಣೆ ಭಕ್ತಿಭಾವದ ಜೊತೆಗೆ ಭವ್ಯ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.
ನಗರದ ಶ್ರೀರಾಮ ದೇವಾಲಯದಿಂದ ಪ್ರಾರಂಭವಾಗಿ ಆಂಜನೇಯ ಸ್ವಾಮಿ ದೇಗುಲ, ಅಗ್ರಹಾರ ಬೀದಿ, ಕಾಮಣ್ಣನಗುಡಿ ವೃತ್ತ, ಎಂ.ಜಿ.ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕೆಂಗಲ್ ಹನುಮಂತಯ್ಯ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ರಾಮ ದೇವರು, ಶ್ರೀನಿವಾಸ ಹಾಗೂ ಆಂಜನೇಯನ ಉತ್ಸವ ಮೂರ್ತಿ ಹೊತ್ತ ಮೆರವಣಿಗೆ ಆಂಜನೇಯ ಸ್ವಾಮಿ ದೇವಾಲಯದ ಬಳಿಗೆ ಆಗಮಿಸಿತು.ಇದಕ್ಕೂ ಮುನ್ನ ಲೋಕ ಕಲ್ಯಾಣಾರ್ಥ ಪವಮಾನ ಹೋಮ ಜರುಗಿತು. ಬಳಿಕ ರಾಮಮಂದಿರ ಬಳಿಯಿಂದ ಮೆರವಣಿಗೆ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿ ವಿಪ್ರ ಬಾಂಧವರು ಜಮಾಯಿಸಿದರು. ಮಹಡಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ನಿಂತು ನಗರದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಭಕ್ತ ಜನರು ಹನುಮ, ಶ್ರೀರಾಮ, ಶ್ರೀನಿವಾಸ ಮೂರ್ತಿಗೆ ಪೂಜೆ ಸಲ್ಲಿಸಿದರು.
ಕೇಸರಿ ಶಾಲು ಹಾಕಿಕೊಂಡು ಮೆರವಣಿಯುದ್ದಕ್ಕೂ ಮಂಗಳವಾದ್ಯದೊಂದಿಗೆ ರಾಮ, ಲಕ್ಷ್ಮಣ, ಜಾನಕಿ ಜೈ ಬೋಲೊ ಹನುಮಾನ್ ಕಿ . ಜೈ ಭಜರಂಗಿ, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಶ್ರೀ ರಾಮಮಂದಿರದಿಂದ ಹೊರಟ ಮೆರವಣಿಗೆ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಶ್ರೀ ರಾಮ ದೇವಾಲಯದ ಬಳಿ ಅಂತ್ಯಗೊಂಡಿತು. ಮೆರವಣಿಗೆ ಬಳಿಕ ಶ್ರೀರಾಮ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭರತನಾಟ್ಯ, ಭಕ್ತಿಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಉಪಾಧ್ಯಕ್ಷ, ರಾಜಶೇಖರ್.ಜಿ. ರಾವ್, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್. ಜಿ. ಚಂದ್ರಶೇಖರ್. ಶ್ರೀ ಶಂಕರ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಚ್. ವಿ. ಶೇಷಾದ್ರಿ ಅಯ್ಯರ್ , ವಿಪ್ರ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಕೇಶವ ವೈದ್ಯ, ಫ್ರಧಾನ ಕಾರ್ಯದರ್ಶಿ ಬಿ. ಆರ್. ಉಮೇಶ್ ಶಾಸ್ತ್ರಿ ಮಾತನಾಡಿದರು.
ವೇದಿಕೆಯಲ್ಲಿ ಟ್ರಸ್ಟ್ ನ ಖಜಾಂಚಿ ಕೆ. ಆರ್. ವಿಜಯಕುಮಾರ್, ಜಿಲ್ಲಾ ಪ್ರತಿನಿಧಿ ರಾಘವೇಂದ್ರ ಮಯ್ಯ ಟ್ರಸ್ಟ್ ನ ಸದಸ್ಯರುಗಳಾದ ಎಸ್. ಬಾಲಸುಬ್ರಹ್ಮಣ್ಯ ಅಯ್ಯರ್. ಪಿ.ವೈ.ರವಿಂದ್ರ ಹೇರ್ಳೆ, , ಎಸ್. ಜಿ. ಪ್ರಸಾದ್. ಎಮ್. ಪಿ. ಗಣೇಶ್ ಭಟ್, ಆರ್.ವಿಶ್ವನಾಥ್, ಸಂದೀಪ್. ಕೆ. ಎನ್., ಶ್ರೀನಿವಾಸ್ ರಾವ್ , ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ರತ್ನ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಧಾ ದೇಶಪಾಂಡೆ, ಖಜಾಂಚಿ ಪದ್ಮ ಮಂಜುನಾಥ್, ವಿಪ್ರ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷ ಸರಸ್ವತಿ ರಾಮಗೋಪಾಲ್, ಮಾಜಿ ಕಾರ್ಯದರ್ಶಿ ಜೆ. ಶಾಂತಾಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.