ಸಾರಾಂಶ
ಗದಗ: ಸಹಕಾರ ಭೀಷ್ಮ ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಈ ಗೋಡಂಬಿ ಸಂಸ್ಕರಣೆ ಘಟಕ ಒಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ತಾಲೂಕಿನ ಹುಲಕೋಟಿಯಲ್ಲಿ ಜಿಪಂ, ತೋಟಗಾರಿಕೆ ಇಲಾಖೆ, ಹುಲಕೋಟಿ ಗ್ರಾಪಂ, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಗೊಡಂಬಿ ಬೆಳೆಗಾರರ ಸಂಘ, ಹುಲಕೋಟಿ ರೈತ ಉತ್ಪಾದಕರ ಕಂಪನಿ ಇವುಗಳ ಆಶ್ರಯದಲ್ಲಿ ರೂರ್ಬನ ಅಡಿಯಲ್ಲಿ ನಿರ್ಮಿಸಲಾದ ಗೊಡಂಬಿ ಸಂಸ್ಕರಣೆ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಗದಗ ತಾಲೂಕಿನ ಗೋಡಂಬಿ ರುಚಿಯಲ್ಲಿ ತುಂಬಾ ಶ್ರೇಷ್ಠವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಗೋಡಂಬಿಗೆ ಮಾರುಕಟ್ಟೆ ಒದಗಿಸುವದು ಬಹುದೊಡ್ಡ ಸವಾಲಾಗಿದೆ. ಇದಕ್ಕೆ ಈ ಸಂಸ್ಕರಣಾ ಘಟಕ ಸಹಕಾರಿ ಆಗಲಿ. ಗ್ರಾಮಗಳ ಅವಶ್ಯಕತೆ ಪೂರೈಸುವಲ್ಲಿ ರೂರ್ಬನ್ ಯೋಜನೆ ಬಳಕೆ ಮಾಡಿಕೊಳ್ಳಲಾಗಿದೆ. ಇಂತಹ ಅನೇಕ ರೈತರಿಗೆ ಬಲ ತುಂಬಲು ಬಳಕೆ ಆಗುತ್ತಿರುವುದು ಸಂತಸ ತಂದಿದೆ. ಸುತ್ತಲಿನ ಭಾಗದ ರೈತರಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿ ಎಂದರು.
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರೈತರ ಪರವಾಗಿ, ಅವರ ಬೆಳೆಗೆ ಉತ್ತಮ ಮೌಲ್ಯ ಕೊಡಿಸುವಲ್ಲಿ ಹಲವಾರು ಕಾರ್ಯ ಮಾಡಿದವರು ಹಿರಿಯರಾದ ಕೆ.ಎಚ್.ಪಾಟೀಲರು. ಹುಲಕೋಟಿಯಲ್ಲಿ ಗೋಡಂಬಿ ಘಟಕ ನಿರ್ಮಾಣಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದ. ಆಹಾರದಲ್ಲಿ ಸ್ವಾವಲಂಬಿಯಾದ ರಾಷ್ಟ್ರ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ರಾಷ್ಟ್ರ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರತವಾಗಬೇಕು ಎಂದರು.ರೈತ ಗಟ್ಟಿಯಾದರೇ ದೇಶ ಗಟ್ಟಿಗೊಳ್ಳುವದು. ಆರ್ಥಿಕ ಸಬಲತೆಗೆಯೆಗೆ ರೈತರು ಸಾಗಬೇಕು. ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಕೃಷಿಯಿಂದ ಸಾಧ್ಯ. ಆದುದರಿಂದ ರೈತರ ಕೃಷಿ ಪರವಾದ ಯೋಜನೆಗಳು ಹೆಚ್ಚು ಹೆಚ್ಚು ಅನುಷ್ಠಾನ ಮಾಡುವ ಮೂಲಕ ಆರ್ಥಿಕಾಭಿವೃದ್ಧಿ ಆಗಲಿ ಎಂದು ತಿಳಿಸಿದರು.
ಬಯಲು ಸೀಮೆಯಲ್ಲು ಗೋಡಂಬಿ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ ಈ ಭಾಗದ ರೈತರು. ಸುಮಾರು 1600 ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆದು ಬಯಲು ಸೀಮೆಯಲ್ಲು ಗೋಡಂಬಿ ಕೃಷಿ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಶ್ಯಾಮ ಪ್ರಸಾದ ಮೂಖರ್ಜಿ ರೂರ್ಬನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯದಿಂದ ಇಲ್ಲಿ ಸಫಲವಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಭರತ್.ಎಸ್, ಗ್ರಾಪಂ ಅಧ್ಯಕ್ಷೆ ನಾಗರತ್ನಾ, ಉಪಾಧ್ಯಕ್ಷ ಎ.ವಿ.ತಹಸೀಲ್ದಾರ ಸೇರಿದಂತೆ ಇತರರು ಇದ್ದರು.