ಸಾರಾಂಶ
ಕನ್ನಡಪ್ರಭ ವಾರ್ತೆ ಕುಕನೂರು
ಪಟ್ಟಣದ ಸಾರ್ವಜನಿಕರ ಸಮಸ್ಯೆಗಳಿಗೆ ಹಾಗೂ ಪಪಂ ಕಚೇರಿಗೆ ಸಂಬಂಧಿಸಿದಂತೆ ಕೆಲಸಗಳಿಗೆ ತ್ವರಿತವಾಗಿ ಪಪಂ ಅಧಿಕಾರಿ, ಸಿಬ್ಬಂದಿ ವರ್ಗದವರಿಂದ ಸ್ಪಂದನೆ ಸಿಗಬೇಕು ಎಂದು ಪಪಂ ಸದಸ್ಯರು ಆಗ್ರಹಿಸಿದ್ದಾರೆ.ಪಟ್ಟಣದ ಎಪಿಎಂಸಿಯ ಸಭಾಭವನದಲ್ಲಿ ಬುಧವಾರ ಜರುಗಿದ ಪಪಂ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಅವರು, ಪಪಂನಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ನೀಡಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಸಮರ್ಪಕವಾಗಿ ಸಾರ್ವಜನಿಕರಿಗೆ ನೀರಿನ ಸೌಲಭ್ಯ ನೀಡಬೇಕಾಗಿದೆ. 98 ಬೋರ್‌ವೆಲ್ ಪೈಕಿ ೪೬ರಲ್ಲಿ ನೀರು ಬರುತ್ತಿದೆ. ಇನ್ನುಳಿದ ಬೋರ್‌ವೆಲ್‌ಗಳನ್ನು ರಿಪೇರಿ ಮಾಡಲಾಗುವುದು. ಪಂಚಾಯಿತಿಗೆ ಹೊಸದಾಗಿ ೨ ಟಿಪ್ಪರ್‌ಗಳ ಜತೆಗೆ ಒಂದು ಶವ ಸಾಗಿಸುವ ವಾಹನ ಬರಲಿದೆ. ೨೦೧೯-೨೦ ಸಾಲಿನಲ್ಲಿ ಕಾಮಗಾರಿಗಳು ಬಾಕಿ ಇದ್ದವು. ₹೫ ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಪಪಂ ಸದಸ್ಯ ಸಿರಾಜ ಕರಮುಡಿ ಮಾತನಾಡಿ, ಪಪಂ ಸಿಬ್ಬಂದಿ ಸರಿಯಾದ ಸಮಯಕ್ಕೆ ಪಪಂ ಕಚೇರಿಗೆ ಬರುವುದಿಲ್ಲ. ಫಾರಂ-೩ನ್ನು ೭ ದಿನದ ಒಳಗಾಗಿ ಕೊಡಬೇಕು. ಆದರೆ, ಸಿಬ್ಬಂದಿ ಸಾರ್ವಜನಿಕರು ಕೊಟ್ಟಿರುವ ಅರ್ಜಿಗಳನ್ನು ಕಳೆದುಬಿಟ್ಟಿರುತ್ತಾರೆ ಎಂದರು.ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಪಟ್ಟಣದ ೧೮, ೧೬, ೧೫, ೧೪ ವಾರ್ಡ್‌ಗಳಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಏಕೆ ನೀವು ನಮ್ಮ ವಾರ್ಡ್‌ಗಳಿಗೆ ನೀರು ಬಿಡಲು ಭೇದ-ಭಾವ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗರಿಕ ಸೌಲಭ್ಯ ಜಾಗಗಳ ವಿತರಣೆ ಬಗ್ಗೆ, ನಗರದ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಮತ್ತು ಜಾಗ ನೀಡುವ ಕುರಿತು, ವಿನೋಭಾನಗರದ ಕೆಇಬಿ ರಸ್ತೆ ಹಾಗೂ ಜವಳದ ರಸ್ತೆ ಅಗಲೀಕರಣ ಕುರಿತು, ಹೈಟೆಕ್ ಶೌಚಾಲಯಕ್ಕಾಗಿ ಕಾರ್ಮಿಕ ಟೆಂಡರ್ ಕರೆಯುವ ಬಗ್ಗೆ, ಸ್ಮಶಾನಗಳಲ್ಲಿ ಸಸಿ ನೆಡುವ ಬಗ್ಗೆ, ಗರಡಿ ಮನೆ ಅಭಿವೃದ್ಧಿ ಪಡಿಸುವ ಬಗ್ಗೆ, ಸಿಬ್ಬಂದಿ ಕಾರ್ಯನಿರ್ವಹಣೆಯ ಬಗ್ಗೆ, ಎಲ್‌ಎನ್‌ಟಿ ಕಂಪನಿಯಿಂದ ತುಂಗಭದ್ರಾ ಪಂಪ್‌ಹೌಸ್ ಹಾಗೂ ಟ್ಯಾಪ್ ಪೈಪ್‌ಲೈನ್ ಅಳವಡಿಸುವ ಬಗ್ಗೆ, ವಾಣಿಜ್ಯ ಮಳಿಗೆಗಳ ಹರಾಜು ಮಾಡುವ ಬಗ್ಗೆ ಚರ್ಚಿಸಲಾಯಿತು.ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ಪ್ರಶಾಂತ ಆರ್. ಬೆರಳಿನ್, ಪಪಂ ಸದಸ್ಯರಾದ ನೂರುದ್ದೀನಸಾಬ್ ಗುಡಿಹಿಂದಲ್, ಬಾಲರಾಜ ಗಾಳಿ, ಗಗನ ನೋಟಗಾರ, ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಸಿದ್ದು ಉಳ್ಳಾಗಡ್ಡಿ, ಶಿವರಾಜಗೌಡ, ಮಂಜುನಾಥ ಕೋಳೂರು, ಮಂಜುಳಾ ಕಲ್ಮನಿ, ಲೀಲಾವತಿ ಮುಧೋಳ, ಲಕ್ಷ್ಮಿ ಸಬರದ್, ನೇತ್ರಾವತಿ ಮಾಲಗಿತ್ತಿ, ಕವಿತಾ ಹೂಗಾರ, ರಾಧಾ ದೊಡ್ಡಮನಿ, ಫಿರ್ದೋಶ್‌ಬೇಗಂ ಖಾಜಿ, ಜಗನ್ನಾಥ ಭೂವಿ, ಮಲ್ಲಿಕಾರ್ಜುನ ಚೌಧರಿ ಹಾಗೂ ಪಪಂ ಸಿಬ್ಬಂದಿ ಇದ್ದರು.