ಕೊಣನೂರು ಪೊಲೀಸ್ ಠಾಣೆಯಿಂದ ರಕ್ಷಣೆ ಕೋರಿ ಬಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆ ನೀಡುತ್ತಿರುವ ಬಗ್ಗೆ ಕೆಲವು ಅರ್ಜಿಗಳನ್ನು ಸಭೆಯಲ್ಲಿ ಸಲ್ಲಿಸಲಾಗಿದೆ. ಸರ್ಕಾರ ಕೈತುಂಬ ಸಂಬಳ ನೀಡಿದರೂ ಕೂಡ ಲಂಚದ ಆಸೆಯಿಂದ ಜನರನ್ನು ನೋಯಿಸುವುದು ಒಳ್ಳೆಯದಲ್ಲ. ಅವರ ಶಾಪ ತಟ್ಟಿದರೆ ಮುಂದೆ ಸುದಾರಿಸಿಕೊಳ್ಳಲು ಆಗುವುದಿಲ್ಲ ಎಂದು ಪಿಎಸ್‌ಐಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಮುಂದೆ ಈ ರೀತಿ ತೊಂದರೆ ನೀಡುವುದು ಕಂಡುಬಂದರೇ ಕಾನೂನು ಕ್ರಮವಹಿಸುವುದಾಗಿ ಎಚ್ಚರಿಸಿದರು.

ಕನ್ನಡಪ್ರಭವಾರ್ತೆ, ಅರಕಲಗೂಡು

ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನ ಕೇವಲ ಶನಿವಾರಕ್ಕೆ ಸೀಮಿತಗೊಳ್ಳದೇ ನಿತ್ಯವೂ ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಆಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮಾಡಿಕೊಳ್ಳುವ ಸಂಕಲ್ಪ ಕೈಗೊಂಡರೆ ಅದೇ ಸರ್ಕಾರಕ್ಕೆ ತಂದುಕೊಡುವ ದೊಡ್ಡಗೌರವ ಆಗಲಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಕೊಣನೂರು ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಕೇಂದ್ರದಲ್ಲಿ ಮೊದಲ ಪ್ರಜಾಸೇವಾ ಆಂದೋಲನ ಸಭೆ ಆಯೋಜನೆ ಮಾಡಿದ್ದು, ಹತ್ತಾರು ಅರ್ಜಿ ಬಂದಿದ್ದವು. ಆದರೆ ಎಷ್ಟು ಅರ್ಜಿಗಳಿಗೆ ಪರಿಹಾರ ದೊರೆತಿದೆ ಎಂಬುದು ಕಾರ್ಯಕ್ರಮಕ್ಕೆ ಮುನ್ನ ಓದಬೇಕು. ಆಗ ಮಾತ್ರ ಸರಕಾರದ ಪ್ರಜಾಸೇವೆ ಆಂದೋಲನದ ಮಹತ್ವ ಜನ ಸಾಮಾನ್ಯರಿಗೆ ಅರಿವಾಗಲಿದೆ. ಇಂದು ಕೂಡ ಕೊಣನೂರು ಹೋಬಳಿ ವ್ಯಾಪ್ತಿ ವಿವಿಧ ಸಮಸ್ಯೆ ಕುರಿತು ರೈತರು, ಜನ ಸಾಮಾನ್ಯರು 96ಕ್ಕೂ ಹೆಚ್ಚಿನ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಅರ್ಜಿ ಸಭೆಯಲ್ಲಿ ಖುದ್ದು ಆಲಿಸಲಾಗಿದೆ. ಇದಕ್ಕೆ ಪರಿಹಾರ ಕಲ್ಪಿಸಿರುವ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಆಯಾ ಇಲಾಖೆ ಅಧಿಕಾರಿಗಳು ತಿಳಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಮ್ಮ ಕ್ಷೇತ್ರದಲ್ಲಿ ನಡೆಯುವ ಪ್ರಜಾಸೇವೆ ಆಂದೋಲನ ಸಭೆ ಅತ್ಯಂತ ಯಶಸ್ವಿ, ಗೌರವಪೂರ್ವಕವಾಗಿ ನಡೆಯಬೇಕಿದೆ. ಅಧಿಕಾರಿಗಳು, ಸಿಬ್ಬಂದಿ ತಮ್ಮ ಧೋರಣೆ ಬದಲಿಸಿಕೊಂಡು ಸ್ಪಂದಿಸಬೇಕಿದೆ. ಉಢಾಫೆಯಿಂದ ನಡೆದುಕೊಂಡಿದ್ದೇ ಆದಲ್ಲಿ ಕಾನೂನು ರೀತಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ತಾಲೂಕನ್ನು ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನೂ ಕೂಡ ಎಲ್ಲಿಯೂ ಮಳೆ ಬಿದ್ದಿಲ್ಲ. ಬೆಳೆ ಬಹುತೇಕ ನಾಶಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಎಚ್ಚರ ತಪ್ಪದೇ ಜನ ಸಾಮಾನ್ಯರು, ರೈತರಿಗೆ ತಮ್ಮ ತಮ್ಮ ಇಲಾಖೆ ವತಿಯಿಂದ ಸಿಗುವ ಸೌಕರ್ಯವನ್ನು ನೇರವಾಗಿ ಸಂಪರ್ಕಿಸಿ ತಲುಪಿಸುವ ಕೆಲಸವನ್ನು ಮಾಡಬೇಕಿದೆ. ಪ್ರಮುಖವಾಗಿ ಗ್ರಾಪಂ ಆಡಳಿತಾಧಿಕಾರಿಗಳು, ಅಭಿವೃದ್ದಿ ಅಧಿಕಾರಿಗಳು ಜಂಟಿಯಾಗಿ ಕುಡಿಯುವ ನೀರು ಸೇರಿ ಇತರೆ ಮೂಲಭೂತ ಸೌಕರ್ಯ ಬಗ್ಗೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕಿದೆ ಎಂದು ಸೂಚನೆ ನೀಡಿದರು.

ಕೊಣನೂರು ಪೊಲೀಸ್ ಠಾಣೆಯಿಂದ ರಕ್ಷಣೆ ಕೋರಿ ಬಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆ ನೀಡುತ್ತಿರುವ ಬಗ್ಗೆ ಕೆಲವು ಅರ್ಜಿಗಳನ್ನು ಸಭೆಯಲ್ಲಿ ಸಲ್ಲಿಸಲಾಗಿದೆ. ಸರ್ಕಾರ ಕೈತುಂಬ ಸಂಬಳ ನೀಡಿದರೂ ಕೂಡ ಲಂಚದ ಆಸೆಯಿಂದ ಜನರನ್ನು ನೋಯಿಸುವುದು ಒಳ್ಳೆಯದಲ್ಲ. ಅವರ ಶಾಪ ತಟ್ಟಿದರೆ ಮುಂದೆ ಸುದಾರಿಸಿಕೊಳ್ಳಲು ಆಗುವುದಿಲ್ಲ ಎಂದು ಪಿಎಸ್‌ಐಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಮುಂದೆ ಈ ರೀತಿ ತೊಂದರೆ ನೀಡುವುದು ಕಂಡುಬಂದರೇ ಕಾನೂನು ಕ್ರಮವಹಿಸುವುದಾಗಿ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕೊಣನೂರು ಹೋಬಳಿಯ ವಿವಿಧ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರಿಂದ 96ಅರ್ಜಿಗಳನ್ನು ಸ್ವೀಕರಿಸಿ, ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಈ ಪೈಕಿ ಕೆಲವು ಅರ್ಜಿಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.

ಉಳಿದ ಅರ್ಜಿಗಳ ಸಮಸ್ಯೆಗಳನ್ನು ಇನ್ನೂ 15 ದಿನಗಳೊಳಗಾಗಿ ಪರಿಹರಿಸುವಂತೆ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಸಿ. ಸೌಮ್ಯ, ವಿವಿಧ ಇಲಾಖೆ ಅಧಿಕಾರಿಗಳಾದ ನಾರಾಯಣ, ಡಾ. ಪುಷ್ಪಲತಾ, ರಾಜೇಶ್, ರಂಗಸ್ವಾಮಿ, ವೆಂಕಟೇಶ್, ಸುಂದರ್, ಸೋಮಶೇಖರ್, ನವೀನ್ ಇತರೆ ಅಧಿಕಾರಿಗಳು ಇದ್ದರು.