ಸಾರಾಂಶ
ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸಲಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ೧೦೭೯ ರಡ್ಡಿ ಲಿಂಗಾಯತ ಎಂದು ನಮೂದಿಸಬೇಕು ಎಂದು ಸಮಾಜದ ಗೌರವ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳ ಮತ್ತು ಮುಖಂಡರ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ರಾಜ್ಯ ಸರ್ಕಾರ ಇದೇ ಸೆ.೨೨ರಿಂದ ಎಲ್ಲ ಜನಾಂಗದ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಮತ್ತು ಇನ್ನಿತರ ಸುಮಾರು ೬೦ ಮಾಹಿತಿಯ ಜನಗಣತಿ ಆರಂಭಿಸಲಿದೆ. ಸರ್ಕಾರದ ಅಧಿಕಾರಿಗಳು ಮನೆಗೆ ಬಂದು ನಿಗದಿಪಡಿಸಿದ ನಮೂನೆಯಲ್ಲಿ ನಿಮ್ಮಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ಈ ಜನಗಣತಿಯಲ್ಲಿ ಕುಟುಂಬದ ವೈಯಕ್ತಿಕ ಸ್ಥಿತಿಗತಿಗಳ ವಿವರಗಳನ್ನು ಸಂಪೂರ್ಣವಾಗಿ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ರಡ್ಡಿ ಅಥವಾ ಲಿಂಗಾಯತ ರಡ್ಡಿ (ಕೋಡ್ ನಂಬರ್ ೧೦೭೯) ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ವಿವರಿಸಿದರು.
ಸಮೀಕ್ಷೆಯ ಜಾತಿ ಕಾಲಂನಲ್ಲಿ "ಲಿಂಗಾಯತ ರಡ್ಡಿ ೧೦೭೯'''''''' ಎಂದೇ ನಮೂದಿಸುವಂತೆ ಜಾಗೃತಿ ಮೂಡಿಸಲು ಹಾಗೂ ಸಾಧ್ಯವಾದರೆ ಜನಪ್ರತಿನಿಧಿ ಅಥವಾ ಸಮಾಜದ ಪ್ರಮುಖರು ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಮನದಟ್ಟು ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ರಾಜ್ಯದ ದೊಡ್ಡ ಸಮಾಜಗಳ ಪೈಕಿ ಒಂದಾಗಿರುವ ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಸಂಘಟನೆ, ಪುನಶ್ಚೇತನಕ್ಕೆ ವೇದಿಕೆ ಸಿದ್ಧಗೊಂಡಿದೆ ಎಂದರು.ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯನ್ನು ಕೇಂದ್ರವಾಗಿರಿಸಿಕೊಂಡು ಸಮಾಜ ಸಂಘಟನೆ ಜತೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಡ್ಡಿ ಸಮಾಜದಿಂದ ಕೋ ಆಪರೇಟಿವ್ ಬ್ಯಾಂಕ್ (ಸಹಕಾರ ಸಂಘ) ಆರಂಭಿಸುವ ಚಿಂತನೆಯನ್ನೂ ಹೊಂದಲಾಗಿದೆ. ಹುಬ್ಬಳ್ಳಿಯಿಂದಲೇ ಆರಂಭಿಸಿ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ ವಿವಿಧೆಡೆ ವಿಸ್ತರಿಸಲು ಯೋಜಿಸಲಾಗಿದೆ. ಷೇರು ಬಂಡವಾಳ ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಶಿಕ್ಷಣಕ್ಕೆ ಪೂರಕವಾಗಿ ಸಮಾಜದ ಬಡ ವಿದ್ಯಾರ್ಥಿಗಳಿಗಾಗಿ ರಾಜ್ಯದ ನಾಲ್ಕು ವಿಭಾಗಳಲ್ಲಿ ಉಚಿತ ಹಾಸ್ಟೆಲ್ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಶಾಸಕರಾದ ಹಂಪನಗೌಡ ಬಾದರ್ಲಿ, ಅಪ್ಪಾಜಿ ನಾಡಗೌಡ, ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ದೊಡ್ಡನಗೌಡ ಪಾಟೀಲ, ಕೇಸರಟ್ಟಿ ವೀರಪ್ಪ, ಮಾಜಿ ಸಚಿವ ಎಸ್.ಆರ್. ಪಾಟೀಲ, ಶ್ರೀನಿವಾಸ ರೆಡ್ಡಿ, ಡಾ. ಮಹಿಪಾಲ ಜಾಗಿರದಾರ, ವಕೀಲ ಗುರಡ್ಡಿ ಸೇರಿದಂತೆ ಅನೇಕರಿದ್ದರು.