ಸರ್ಕಾರಿ ಶಾಲೆಗಳಲ್ಲಿರುವ ನಿಯಮ ಖಾಸಗಿ ಶಾಲೆಗಳಿಗೂ ಅನ್ವಯವಾಗಬೇಕು. ಚಳಿಗಾಲ ಅಧಿವೇಶನಕ್ಕೂ ಮುನ್ನವೇ ರಾಜ್ಯ ಸರ್ಕಾರ ಸಭೆ ಕರೆದು ಚರ್ಚಿಸಿ, ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರ ರೂಪಕ್ಕೆ ಹೋಗಲಿದೆ.

ಧಾರವಾಡ:

ಕಾಲ್ಪನಿಕ ವೇತನ, ಹಳೆ ಪಿಂಚಣಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ಇಲ್ಲಿಯ ಲಿಂಗಾಯತ ಟೌನ್‌ಹಾಲ್‌ನಿಂದ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ವಿವೇಕಾನಂದ ವೃತ್ತ, ಜ್ಯುಬಲಿ ವೃತ್ತ , ಕೋರ್ಟ ಸರ್ಕಲ್ ಮಾರ್ಗವಾಗಿ ಸಾಗಿ ಡಿಸಿ ಕಚೇರಿಯಲ್ಲಿ ಸಂಪನ್ನಗೊಂಡಿತು. ಈ ವೇಳೆ ಮೆರವಣಿಗೆ ಉದ್ದಕ್ಕೂ ಹಳೆಯ ಪಿಂಚಣಿ, ಕಾಲ್ಪಿನಿಕ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಯ ಭಿತ್ತಿ ಫಲಕ ಹಿಡಿದು ಶಿಕ್ಷಕರ ಸಮುದಾಯ ಆಗ್ರಹಿಸಿದರು.

ಏನೇನು ಬೇಡಿಕೆ:

ಉಚ್ಚನ್ಯಾಯಾಲಯದ ಆದೇಶದಂತೆ ಕಾಲ್ಪನಿಕ ವೇತನದೊಂದಿಗೆ 2006 ಏ.1 ನಂತರ ನೇಮಕಗೊಂಡ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಜಾರಿ ಮಾಡಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿ 2015ರಿಂದ ಈ ವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಆದೇಶ ಹೊರಡಿಸಬೇಕು. ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1998ರಿಂದ ಖಾಲಿ ಇರುವ ಹುದ್ದೆ ತುಂಬಬೇಕು. ದ್ವಿಭಾಷಾ ಪದ್ಧತಿಯನ್ನು ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಲಾಯಿತು.

ಮಾನ್ಯತೆ ನವೀಕರಣ ಗೊಂದಲ ಸರಿಪಡಿಸಿ, ಸರಳೀಕರಣ ಮಾಡಬೇಕು. ಪಿಎಂಶ್ರೀ ಹಾಗೂ ಕೆಪಿಎಸ್ ಶಾಲೆಗಳನ್ನು ಅನುದಾನಿತ ಶಾಲೆಗಳಿಂದ 3 ಕಿಮೀ ವ್ಯಾಪ್ತಿಯ ಹೊರಗೆ ತೆಗೆಯಬೇಕು. ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಶೇ.50ರಷ್ಟು ಆಡಳಿತ ಮಂಡಳಿ ಕೋಟಾದಲ್ಲಿ ಪ್ರವೇಶ ನೀಡಲು ಅನುಮತಿ ಕೊಡಬೇಕು. ಸರ್ಕಾರಿ ನೌಕರರಂತೆ ಅನುದಾನಿತ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಋತುಚಕ್ರ ರಜೆ ನೀಡಿ:

ಸರ್ಕಾರಿ ನೌಕರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಇರುವ ಋತುಚಕ್ರ ರಜೆಯನ್ನು ಅನುದಾನಿತ ಮಹಿಳಾ ಸಿಬ್ಬಂದಿಗಳಿಗೂ ಜಾರಿಗೊಳಿಸಬೇಕು. ಸರ್ಕಾರಿ ಅನುದಾನಿತ, ಅನುದಾನರಹಿತ ಎಲ್ಲ ಶಿಕ್ಷಕರಿಗೆ ಬೋಧನೆಗಿಂತ ದಾಖಲೆ ನಿರ್ವಹಣೆ ಹಾಗೂ ಆನ್‌ಲೈನ್ ದಾಖಲೀಕರಣ ಹೊರೆಯಾಗಿದ್ದು, ಇವುಗಳಿಂದ ಶಿಕ್ಷಕರಿಗೆ ಮುಕ್ತಿ ಕೊಡಬೇಕು. ತೃತೀಯ ಭಾಷೆ ರದ್ದುಗೊಳಿಸುವ ಆದೇಶ ತಕ್ಷಣ ಹಿಂಪಡೆಯಬೇಕು. ಅನುದಾನರಹಿತ ನೌಕರರಿಗೆ ಪಿಎಫ್‌ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಲಾಯಿತು.

ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವಂತಹ ಚಿತ್ರಕಲಾ, ಸಂಗೀತ, ಹೊಲಿಗೆ, ನಾಟಕ ಸೇರಿದಂತೆ ವಿವಿಧ ಹುದ್ದೆ ಭರ್ತಿ ಮಾಡಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಖಾಲಿ ಹುದ್ದೆ ತುಂಬುವುದು, ತಕ್ಷಣವೇ ನೇಮಕಾತಿಗೆ 5 ವರ್ಷಗಳ ವಯೋಮಿತಿ ಹೆಚ್ಚಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಸಾವಿರಾರು ಶಿಕ್ಷಕರು ಇದ್ದರು. ಸರ್ಕಾರಿ ಶಾಲೆಗಳಲ್ಲಿರುವ ನಿಯಮ ಖಾಸಗಿ ಶಾಲೆಗಳಿಗೂ ಅನ್ವಯವಾಗಬೇಕು. ಚಳಿಗಾಲ ಅಧಿವೇಶನಕ್ಕೂ ಮುನ್ನವೇ ರಾಜ್ಯ ಸರ್ಕಾರ ಸಭೆ ಕರೆದು ಚರ್ಚಿಸಿ, ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರ ರೂಪಕ್ಕೆ ಹೋಗಲಿದೆ. ಮಂಗಳವಾರ ಶಾಲೆಗೆ ರಜೆ ಹಾಕಿ ಪ್ರತಿಭಟಿಸಿದ್ದು, ನ. 18ರ ಬುಧವಾರದಿಂದ ಶಾಲೆಗಳಿಗೆ ಬೀಗ ಹಾಕಬೇಕಾಗುತ್ತದೆ. ಬೇಡಿಕೆ ಈಡೇರು ವರೆಗೂ ಅನಿರ್ದಿಷ್ಟಾವಧಿ ಶಾಲಾ-ಕಾಲೇಜು ಬಂದ್ ಆಗಲಿದ್ದು, ಈ ನಿರ್ಧಾರದಿಂದ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ.

ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಮಾಜಿ ಸಭಾಪತಿ