ಮಂಜೂರಾದ ಅನುದಾನ ಮರಳಿದಿರಲಿ: ನಟರಾಜ

| Published : Mar 01 2024, 02:20 AM IST

ಸಾರಾಂಶ

ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ತಾಲೂಕಿಗೆ ಮಂಜೂರಾದ ಯಾವುದೇ ಅನುದಾನಗಳು ವ್ಯರ್ಥವಾಗಿ ಮರಳಿ ಹೋಗದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಗಂಭೀರ ಗಮನ ಹರಿಸಬೇಕು.

ಯಲ್ಲಾಪುರ:

ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ತಾಲೂಕಿಗೆ ಮಂಜೂರಾದ ಯಾವುದೇ ಅನುದಾನಗಳು ವ್ಯರ್ಥವಾಗಿ ಮರಳಿ ಹೋಗದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಗಂಭೀರ ಗಮನ ಹರಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಎಚ್. ಹೇಳಿದರು.

ಅವರು, ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭಾರಿ ತಾಪಂ ಇಒ ಆಗಿರುವ ಬಿಇಒ ಎನ್.ಆರ್. ಹೆಗಡೆ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ೫,೮,೯ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಬಾರಿ ಪಬ್ಲಿಕ್ ಪರೀಕ್ಷೆ ಏರ್ಪಡಿಸಲಾಗಿದ್ದು, ಆಯಾ ಶಾಲೆಗಳಲ್ಲಿಯೇ ಮಾ. ೧೧ರಿಂದ ಪರೀಕ್ಷೆ ನಡೆಯಲಿದೆ. ಶುಕ್ರವಾರದಿಂದ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಮಾ. ೨೫ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತದೆ ಎಂದ ಅವರು, ತಾಲೂಕಿನಲ್ಲಿ ಮಣ್ಣಿನ ಗೋಡೆ ಹೊಂದಿದ ೨೫ ಶಾಲೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಮಂಗನ ಕಾಯಿಲೆಯ ಯಾವುದೇ ವರದಿಗಳು ಬಂದಿಲ್ಲ. ಆದಾಗ್ಯೂ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯವಿದೆ. ತಮ್ಮ ಪ್ರದೇಶದಲ್ಲಿ ಸತ್ತ ಮಂಗಗಳು ಕಂಡರೆ ಸಾರ್ವಜನಿಕರು ತಕ್ಷಣ ಆರೋಗ್ಯ, ಅರಣ್ಯ ಅಥವಾ ಪಶು ಸಂಗೋಪನಾ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದರು. ಅಂಧತ್ವ ನಿವಾರಣೆಗಾಗಿ ಸರ್ಕಾರ ನೂತನ ಯೋಜನೆಯೊಂದು ಜಾರಿಗೆ ಬರಲಿದೆ. ಆಶಾಕಿರಣ ಎಂಬ ಕಾರ್ಯಕ್ರಮ ಶೀಘ್ರದಲ್ಲಿ ಚಾಲನೆಗೊಳ್ಳಲಿದೆ ಎಂದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳ ಮರು ಸಮೀಕ್ಷೆಗೆ ಸರ್ಕಾರ ಮುಂದಾಗಿದ್ದು, ಆಶಾಕಾರ್ಯಕರ್ತರು ಈ ಕಾರ್ಯವನ್ನು ನೆರವೇರಿಸುವರು ಎಂದು ತಿಳಿಸಿದರು.ಪ್ರಭಾರಿ ಹೆಸ್ಕಾಂ ಸ.ಕಾ.ನಿ. ಅಭಿಯಂತರ ರಮಾಕಾಂತ ನಾಯ್ಕ ಮಾತನಾಡಿ, ಸದ್ಯದ ಸ್ಥಿತಿ ಅವಲೋಕಿಸಿದರೆ ಈ ಬಾರಿ ಲೋಡ್‌ಶೆಡ್ಡಿಂಗ್ ಅನಿವಾರ್ಯತೆ ಕಾಣುತ್ತಿಲ್ಲ. ತಾಲೂಕಿನ ೨೦,೫೬೨ ಫಲಾನುಭವಿಗಳಿಗೆ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಒದಗಿಸಲಾಗಿದೆ. ಮಾ.೧೩,೧೪,೧೫ ರಂದು ತಾಲೂಕಿನ ಉಮ್ಮಚಗಿಯ ವಿದ್ಯುತ್ ಗ್ರಿಡ್‌ನಲ್ಲಿ ದುರಸ್ತಿ ಕಾರ್ಯದ ನಿಮಿತ್ತ ವಿದ್ಯುತ್ ವ್ಯತ್ಯಯವಾಗುವ ಸಂಭವವಿದೆ ಎಂದರು.ಲೋಕೋಪಯೋಗಿ ಇಲಾಖೆಯ ಅಧಿಕಾರಿ, ತಾಲೂಕಿನಲ್ಲಿ ₹ ೧೦.೬೨ ಕೋಟಿ ವೆಚ್ಚದಲ್ಲಿ ೧೫ ಕಾಲು ಸಂಕಗಳ ನಿರ್ಮಾಣ ಕಾರ್ಯ ಆರಂಭಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಈ ಬಾರಿ ತಾಲೂಕಿನಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ನೀರಿನ ಕೊರತೆ ಕಾಣಲಾರಂಭಿಸಿದೆ. ರೈತರಿಗಾಗಿ ಸರ್ಕಾರ ಆರಂಭಿಸಿದ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನಿರ್ಮಿಸಬಹುದಾದ ಕೃಷಿ ಹೊಂಡ ಕಾಮಗಾರಿಗೆ ೮ ರೈತರು ಅರ್ಜಿ ಸಲ್ಲಿಸಿದ್ದಾರೆ. ತಾಲೂಕಿನ ಕಿರವತ್ತಿ, ಮದನೂರು, ಚಂದಗುಳಿ, ಕುಂದರಗಿ, ಇಡಗುಂದಿ, ಕಂಪ್ಲಿ ಗ್ರಾ.ಪಂ.ವ್ಯಾಪ್ತಿಯ ೩,೮೫೫ ರೈತರಿಗೆ ₹ ೬೭,೩೪,೭೯೫ ಬರಗಾಲ ಪರಿಹಾರ ನಿಧಿ ವಿತರಿಸಲಾಗಿದ್ದು, ೨೦೨೨-೨೩ನೇ ಸಾಲಿಗೆ ಬತ್ತ ಬೆಳೆದ ೮೬೪ ರೈತರಿಗೆ ₹ ೨೮,೪೦,೦೦೦ ವಿಮೆ ನೀಡಲಾಗಿದೆ ಎಂದು ವಿವರಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿ ತಾಲೂಕಿನ ೧೮,೩೦೦ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ೬ ಕಂತು ಹಣ ಜಮಾ ಆಗಿದೆ ಎಂಬ ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಾಲೂಕಿನ ಕಂಪ್ಲಿಯಲ್ಲಿರುವ ವಿದ್ಯಾರ್ಥಿನಿಲಯದ ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿ ಅತ್ಯಗತ್ಯವಾಗಿದೆ ಎಂಬ ಮಾಹಿತಿ ನೀಡಿದರು.ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಮಾಹಿತಿ ನೀಡಿದರು.