ಲೈಂಗಿಕ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಮನ್ನಣೆ ಸಿಗಲಿ

| Published : Dec 05 2023, 01:30 AM IST

ಲೈಂಗಿಕ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಮನ್ನಣೆ ಸಿಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ತೆರೆಯ ಮೇಲಿನ ವಿಷಯಗಳು ಬಹುಬೇಗ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಆದರೆ ತೆರೆಯ ಹಿಂದೆ ನಡೆಯುವ ಘಟನೆಗಳನ್ನು ದಾಖಲಿಸುವ ಕೆಲಸವನ್ನು ಸಾಹಿತ್ಯ ನಿರ್ವಹಿಸುತ್ತದೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನ ನಿರ್ವಹಣೆಗಾಗಿ ಒಂದಲ್ಲ ಒಂದು ವೃತ್ತಿಯನ್ನು ಅವಲಂಬಿಸಿರುತ್ತಾರೆ. ಅಂತಹ ವೃತ್ತಿಗಳಲ್ಲಿ ಲೈಂಗಿಕ ವೃತ್ತಿಯೂ ಒಂದಾಗಿದೆ. ಈ ವೃತ್ತಿಯನ್ನು ತಮ್ಮ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡ ಲೈಂಗಿಕ ಕಾರ್ಯಕರ್ತೆಯರನ್ನು ಗೌರವಿಸಬೇಕು. ಅವರಿಗೆ ಸಮಾಜದಲ್ಲಿ ಮನ್ನಣೆ ಸಿಗಬೇಕು ಎಂದು ಸಂಶೋಧಕ ಮಂಜುನಾಥ್‌ ಫಕೀರಪ್ಪ ಉಪ್ಪಾರ್ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ನಡೆದ ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ನಳಿನಿ ಜಮೀಲಾ ಅವರ ''''ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ'''' ಕೃತಿಯ ಕುರಿತು ಉಪನ್ಯಾಸ ನೀಡಿದರು.

ಸಾಹಿತ್ಯ ಕೃತಿಗಳು ಸಮಾಜಶಾಸ್ತ್ರೀಯ ವಿಭಾಗದಲ್ಲಿ ದ್ವಿತೀಯ ಆಕರಗಳಾದರೂ ಆತ್ಮಕಥೆಗಳು ಪ್ರಾಥಮಿಕ ಆಕರಗಳಾಗುತ್ತವೆ ಎಂದರು.

ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ತೆರೆಯ ಮೇಲಿನ ವಿಷಯಗಳು ಬಹುಬೇಗ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಆದರೆ ತೆರೆಯ ಹಿಂದೆ ನಡೆಯುವ ಘಟನೆಗಳನ್ನು ದಾಖಲಿಸುವ ಕೆಲಸವನ್ನು ಸಾಹಿತ್ಯ ನಿರ್ವಹಿಸುತ್ತದೆ ಎಂದರು.

ವಿಭಾಗದ ಮುಖ್ಯಸ್ಥ ಡಾ. ಎ. ಮೋಹನ ಕುಂಟಾರ್ ಮಾತನಾಡಿ, ಭಾಷಾಂತರ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬಹುಶಿಸ್ತೀಯ ನೆಲೆಯಲ್ಲಿಯೂ ಭಾಷಾಂತರ ಕೃತಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಯಕರ ಜಯಮ್ಮ ಅವರು, ಭಾಷಾಂತರ ಎಂದರೆ ಕೇವಲ ಎರಡು ಭಾಷೆಗಳ ನಡುವೆ ನಡೆಯುವ ಕ್ರಿಯೆ ಮಾತ್ರವಲ್ಲ, ಇದು ಎರಡು ಸಮಾಜದ ಸಂಸ್ಕೃತಿ, ಆಚಾರ- ವಿಚಾರ ಜೀವನ ಕ್ರಮದ ವಿನಿಮಯವೂ ಆಗಿದೆ ಎಂದರು.

ನಳಿನಿ ಜಮೀಲಾ ಅವರ ಆತ್ಮಕಥೆ ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಅದು ಅನೇಕ ಸೆಕ್ಸ್ ವರ್ಕರ್‌ಗಳ ಆತ್ಮಕಥೆಯಾಗಿ ಮಹತ್ವ ಪಡೆದಿದೆ ಎಂದರು.

ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾಷಾಂತರ ಮಾಹಿತಿ ಕ್ರೋಡೀಕರಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಚೆಕ್ಅನ್ನು ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ನೀಡಿದರು.

ಕೂಡ್ಲಿಗಿ ತಾಲೂಕಿನ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ವಿಜಯ ಬಂಗೇರ ಹಾಗೂ ಮಾರೇಶ ಅವರು ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ಸ್ವೀಕರಿಸಿದರು. ಸಂಚಾಲಕರಾದ ರೆಬೆಕ್ಕ ಹಾಗೂ ಅನಂತ ಇದ್ದರು. ವಿನೀತ ಜೆ.ಎಂ. ನಿರ್ವಹಿಸಿದರು.