ಮನುಷ್ಯ ಹುಟ್ಟಿನಿಂದಲೇ ಕ್ರೀಡೆ ಪ್ರಾರಂಭವಾಗುತ್ತದೆ, ಕ್ರೀಡಾ ಮನೋಭಾವನೆ ಎಂಬುದು ನಿತ್ಯ ಜೀವನದಲ್ಲೂ ಉತ್ತಮ ಜೀವಿಕೆಗೆ ಪ್ರೇರಣೆಯಾಗಿದೆ.

ಅಶೋಕೆಯ ಸಾರ್ವಭೌಮ ಗುರುಕುಲದ ನೇತೃತ್ವದಲ್ಲಿ ವಾರ್ಷಿಕ ಕ್ರೀಡೋತ್ಸವ

ಕನ್ನಡಪ್ರಭ ವಾರ್ತೆ ಗೋಕರ್ಣ

ಮನುಷ್ಯ ಹುಟ್ಟಿನಿಂದಲೇ ಕ್ರೀಡೆ ಪ್ರಾರಂಭವಾಗುತ್ತದೆ, ಕ್ರೀಡಾ ಮನೋಭಾವನೆ ಎಂಬುದು ನಿತ್ಯ ಜೀವನದಲ್ಲೂ ಉತ್ತಮ ಜೀವಿಕೆಗೆ ಪ್ರೇರಣೆಯಾಗಿದೆ ಎಂದು ವಾಲಿಬಾಲ್ ಆಟಗಾರ ಹಾಗೂ ಹಿರಿಯ ರಾಜಕಾರಣಿ ವಿನೋದ ಪ್ರಭು ಹೇಳಿದರು.

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಅಂಗವಾದ ಸಾರ್ವಭೌಮ ಗುರುಕುಲದ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆವ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.ಗೆಲುವನ್ನು- ಸೋಲನ್ನು ಸಮಾಧಾನದಿಂದ ಸ್ವೀಕರಿಸುವ ಕ್ರೀಡಾ ಮನೋಭಾವನೆಯನ್ನು ಜೀವನಪರ್ಯಂತ ಇಟ್ಟುಕೊಂಡಾಗ ಮಾತ್ರ ಬಲಿಷ್ಠ ವ್ಯಕ್ತಿಯಾಗಿ ನಿರ್ಮಾಣಗೊಳ್ಳಲು ಸಾಧ್ಯ. ಈ ಕ್ರೀಡೋತ್ಸವದ ವಿವಿಧ ತಂಡಗಳ ಇಟ್ಟಿರುವ ಹೆಸರಿಗೆ ಅನ್ವರ್ಥಕವಾಗಿ ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳೆಯಲಿ, ತನ್ಮೂಲಕ ಶ್ರೇಷ್ಠ ಭಾರತ ಬೆಳಗಲಿ ಎಂದು ಶುಭ ಹಾರೈಸಿದರು.

ವಿವಿವಿಯ ಅಶೋಕಾಲೋಕದ ಸಂಯೋಜಕ ಮಂಜುನಾಥ ಸುವರ್ಣಗದ್ದೆ ಮಾತನಾಡಿ, ಜೀವನದಲ್ಲಿ ಎಲ್ಲ ಬಾರಿಗೂ ಗೆಲುವೇ ಸಿಗುವುದಿಲ್ಲ, ಇಲ್ಲಿ ಸೋತವರು ಬದುಕಿನಲ್ಲಿ ಬರುವ ಸೋಲುಗಳನ್ನು ಎದುರಿಸುವ ಧೈರ್ಯ-ಸಾಮರ್ಥ್ಯ ಬೆಳೆಸಿಕೊಳ್ಳುವಂತಾಗಲಿ. ಗುರುಕುಲದ ವಿದ್ಯಾರ್ಥಿಗಳು ಈ ವರೆಗೆ ಮಾಡಿರುವಂತಹ ಸಾಧನೆಗಳು ಸಂತಸ ತಂದಿದೆ. ಎಲ್ಲ ಕ್ಷೇತ್ರಗಳಲ್ಲೂ ನಿರಂತರ ಸಾಧನೆ ನಡೆದು ಗುರುಕುಲಗಳಿಗೆ ಕೀರ್ತಿ ತರುವಂತಾಗಿರಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿವಿಯ ವಿದ್ಯಾ ಪರಿಷತ್ತಿನ ಸಂಯೋಜಕ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಮೈದಾನದಲ್ಲಿ ಗುರುಕುಲದ ಛಾತ್ರರಿಗೆ ಹೊನಲು ಬೆಳಕಿನಾಟ ಕಲ್ಪಿಸಿರುವುದು ಶ್ರೀ ಗುರುಗಳಿಗೆ ಮಕ್ಕಳ ಮೇಲಿರುವ ಪ್ರೀತಿ -ಕಾರುಣ್ಯದ ದ್ಯೋತಕ. ಇಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಪುಣ್ಯವಂತರು. ಈ ಬಾರಿ ಪ್ರತಿಭಾ ಕಾರಂಜಿಯಲ್ಲಿ ಹೇಗೆ ನಿಮ್ಮ ಉತ್ಸಾಹ ಕಾರಂಜಿಯಂತೆ ಚಿಮ್ಮಿದೆಯೋ ಹಾಗೆ ಸದಾ ಸಂತಸದ ಹೊನಲು ನಿಮ್ಮಲ್ಲಿ ತುಂಬಲಿ ಎಂದು ಶುಭ ಹಾರೈಸಿದರು.

ಗಣ್ಯರಾದ ಎಸ್.ಎನ್. ಹೆಗಡೆ ಮಾತನಾಡಿ, ಭಾರತದಲ್ಲಿ ಸ್ವಾತಂತ್ರ‍್ಯಾನಂತರ ಕ್ರೀಡಾಕೂಟ ಆರಂಭವಾದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿ, ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು.

ವ್ಯವಸ್ಥಾ ಪರಿಷತ್‌ ಸಂಯೋಜಕ ಶ್ರೀಕಾಂತ್ ಪಂಡಿತ್, ಪರಂಪರಾ ಗುರುಕುಲದ ಪ್ರಾಚಾರ್ಯ ವಿ. ನರಸಿಂಹ ಭಟ್, ಶಿವ ಗುರುಕುಲದ ಪ್ರಾಚಾರ್ಯ ಘನಪಾಠಿ ಮಂಜುನಾಥ ಭಟ್, ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ. ಹರೀಶ್ ಹೆಗಡೆ, ವಿದ್ಯಾ ಪರಿಷತ್ತಿನ ಸಹ ಸಂಯೋಜಕ ಡಾ. ರವಿ ಪಾಂಡವಪುರ, ಸ್ವಾತಿ ಭಾಗ್ವತ್, ತ್ರಿವೇಣಿ ಯಾಜಿ, ಸಾರ್ವಭೌಮ ಗುರುಕುಲದ ಮುಖ್ಯಾಧ್ಯಾಪಕಿ ಸೌಭಾಗ್ಯಾ ಭಟ್, ಪಿಯು ವಿಭಾಗದ ಪ್ರಾಂಶುಪಾಲೆ ಶಶಿಕಲಾ ಕೂರ್ಸೆ ಉಪಸ್ಥಿತರಿದ್ದರು.

ಜಾನಪದ ವಾದ್ಯಘೋಷಗಳಿಂದ ಗಣ್ಯರನ್ನು ಸ್ವಾಗತಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಸೌಭಾಗ್ಯಾ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಛಾಯಾ ಹೆಗಡೆ ವಂದಿಸಿದರು. ಲೋಹಿತ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಅಕ್ಷಯ ಅಡಿಗುಂಡಿ ಹಾಗೂ ಸಹಶಿಕ್ಷಕ ಸದಾನಂದ ಹೆಬ್ಬಾರ್ ಸಂಯೋಜಕತ್ವದಲ್ಲಿ ಕ್ರೀಡೋತ್ಸವ ನಡೆಯಿತು.