ಎಸ್ಎಸ್ಎಲ್ ಸಿ ಫಲಿತಾಂಶ ಗುಣಾತ್ಮಕವಾಗಿರಲಿ

| Published : Jan 16 2025, 12:50 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ 2024- 25ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶವು ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮಾತ್ರ ಸೀಮಿತವಾಗಿರದೆ ಗುಣಾತ್ಮಕ ಫಲಿತಾಂಶವಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮುಖ್ಯ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯ 2024- 25ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶವು ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮಾತ್ರ ಸೀಮಿತವಾಗಿರದೆ ಗುಣಾತ್ಮಕ ಫಲಿತಾಂಶವಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮುಖ್ಯ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಬುಧವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ, ಎಸಿಸಿ ಸಿಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ‘2024- 25ನೇ ಸಾಲಿನ ವಾರ್ಷಿಕ ಪರೀಕ್ಷೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ’ ಮತ್ತು ‘ವಿದ್ಯಾರ್ಥಿಗಳಿಗೆ ಕಲಿಕಾ ಸಮೃದ್ಧಿ ಪುಸ್ತಕ ಹಸ್ತಾಂತರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 2024- 25ನೇ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಜಿಲ್ಲಾಮಟ್ಟದ ಮೂರನೇ ಹಂತದ ಪ್ರಗತಿ ಪರಿಶೀಲನಾ ಸಭೆಯನ್ನು ಈಗಾಗಲೇ ನಡೆಸಲಾಗಿದೆ. ಎಸ್ಎಸ್ಎಲ್ ಸಿ ಫಲಿತಾಂಶವನ್ನು ಯಾವ ರೀತಿ ಉತ್ತಮ ಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಸಭೆಗಳು ಸಹಾಯಕವಾಗಿವೆ. ಒಂದು ಶಾಲೆಯ ಫಲಿಂತಾಂಶಕ್ಕೆ ಹಿನ್ನಡೆಯಾದರೆ ಅದರಲ್ಲಿ ಜಿಲ್ಲಾಡಳಿತವೂ ಹೊಣೆಗಾರಿಕೆ ಹೊರಬೇಕಾಗಿರುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಯೊಡನೆ ಸಂಯೋಜನೆ ಮಾಡಬೇಕು. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಇನ್ನಷ್ಟು ಪ್ರೋತ್ಸಾಹಿಸಿ ಗುಣಮಟ್ಟವನ್ನು ಹೆಚ್ಚಿಸಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಅವರಿಗೆ ಅರ್ಥೈಸುವ ರೀತಿಯಲ್ಲಿ ಸರಳ ವಿಧಾನದಲ್ಲಿ ತಿಳಿಸಿಕೊಟ್ಟು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ಅವರ ಬರವಣಿಗೆ ಶೈಲಿಯನ್ನು ಗಮನಿಸಿ ತಿದ್ದಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ನಿಗಾವಹಿಸುವಂತೆ ತಿಳಿಸಿದರು.

ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಪೋಷಕರಿಗೆ ತಿಳಿಸಬೇಕು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಜವಾಬ್ದಾರಿ ನೀಡಲಾಗಿದೆ. ಹತ್ತನೇ ತರಗತಿ ಫಲಿತಾಂಶ ವೃದ್ಧಿಗಾಗಿ ಶಿಕ್ಷಕರು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ಕರೆದು ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚೆ ನಡೆಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಬಿಇಒ ಹಾಗೂ ನೋಡೆಲ್ ಅಧಿಕಾರಿಗಳು ಆಯಾ ತಾಲೂಕುಗಳ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳ ಸ್ಥಿತಿಗತಿಗಳ ಕುರಿತು ವರದಿ ನೀಡಬೇಕು. ಮುಂದಿನ ಎರಡು ತಿಂಗಳ ಕಾಲಾವಧಿಯಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ವೃದ್ಧಿಸಿ ಕಳೆದ ಬಾರಿಗಿಂತ ಉತ್ತಮ ಸ್ಥಾನವನ್ನು ಜಿಲ್ಲೆ ಗಳಿಸುವಂತಾಗಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮುನಿಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಎನ್ ಸುಕನ್ಯಾ, ಉಮಾದೇವಿ, ವೆಂಕಟೇಶಪ್ಪ, ಶ್ರೀನಿವಾಸ್ ಮೂರ್ತಿ, ಕೃಷ್ಣಪ್ಪ, ನರೇಂದ್ರ ಕುಮಾರ್, ಎಸಿಸಿ ಸಿಮೆಂಟ್ ವ್ಯವಸ್ಥಾಪಕ ಪ್ರಶಾಂತ್ ದೇಶ್ ಮುಖ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕು ನೋಡೆಲ್ ಅಧಿಕಾರಿಗಳು, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯೋಪಾಧ್ಯಯರು ಇದ್ದರು.-----------

ಬಾಕ್ಸ್........

ಎಸಿಸಿ ಸಿಮೆಂಟ್ ಕಂಪನಿಯಿಂದ ‘ಸಂಜೀವಿನಿ’ ವಿತರಣೆ

ಎಸಿಸಿ ಸಿಮೆಂಟ್ ಕಂಪನಿಯ ಸಹಯೋಗದಲ್ಲಿ ಶಿಕ್ಷಣ ಇಲಾಖೆಯು ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಂಜೀವಿನಿ (ಪಾಸಿಂಗ್ ಪ್ಯಾಕೇಜ್) ಅಭ್ಯಾಸ ಪುಸ್ತಕಗಳನ್ನು ವಿತರಿಸುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಹೆಚ್ಚಿನ ಮಟ್ಟದಲ್ಲಿ ಸಹಾಯಕವಾಗಲಿದ್ದು, ಅವುಗಳನ್ನು ಶಿಕ್ಷಕರು ಅಭ್ಯಾಸ ಮಾಡಿಸಬೇಕು. ವಿದ್ಯಾರ್ಥಿಗಳು ಮನೆಯಲ್ಲಿ ಪ್ರತಿದಿನ ಕನಿಷ್ಠ ಮೂರು ಗಂಟೆ ಕಾಲ ಅಭ್ಯಾಸ ಮಾಡುವುದನ್ನು ಶಿಕ್ಷಕರು ಖಾತ್ರಿಪಡಸಿಕೊಳ್ಳಬೇಕು. ವಿರ್ದಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಲು ಪ್ರೇರಣಾ ತರಗತಿಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಎಸ್ಎಸ್ಎಲ್ ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ 30 ಸಾವಿರ ಕಲಿಕಾ ಸಂಜೀವಿನಿ ಪುಸ್ತಕಗಳನ್ನು ವಿತರಿಸಿದ ಎಸಿಸಿ ಸಿಮೆಂಟ್ ವ್ಯವಸ್ಥಾಪಕ ಪ್ರಶಾಂತ್ ದೇಶ್ ಮುಖ್ ರಿಗೆ ಅಭಿನಂದಿಸಿ, ಕಂಪನಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದರು.