ಕಳೆದ ಬಾರಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ತಾಲೂಕು ಪ್ರಥಮ ಸ್ಥಾನ ಗಳಿಸಿದೆ.

ಹೂವಿನಹಡಗಲಿ: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ತಾಲೂಕು ಪ್ರಥಮ ಸ್ಥಾನ ಪಡೆಯಲು ಮುಖ್ಯ ಗುರುಗಳು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ತಾಲೂಕು ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಇಲಾಖೆಯ ಆಯುಕ್ತರ ಆದೇಶದಂತೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಕಳೆದ ಬಾರಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ತಾಲೂಕು ಪ್ರಥಮ ಸ್ಥಾನ ಗಳಿಸಿದೆ. ಈ ವರ್ಷವೂ ಹೆಚ್ಚು ಸಾಧನೆ ಆಗಬೇಕು ಎಂದರು.

625 ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸರ್ಕಾರಿ ಅನುದಾನಿತ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯಲು ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಕಿವಿಮಾತು ಹೇಳಿದರು.

ಫಲಿತಾಂಶ ಕಡಿಮೆ ಬಂದಲ್ಲಿ ಅಂತಹ ಪ್ರೌಢಶಾಲೆಗಳ ಮೇಲೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹುಲಿಬಂಡಿ ಮಾತನಾಡಿ, ತಾಲೂಕಿನ ಎಸ್ಸೆಸ್ಸೆಲ್ಸಿ ನೋಂದಣಿ ಫಲಿತಾಂಶ ಪ್ರಗತಿ ಕುರಿತು ಅಂಕಿ ಅಂಶಗಳನ್ನು ವಿವರಿಸಿದರು.

ಕನ್ನಡ ವಿಷಯ ಪರಿವೀಕ್ಷಕ ರಾಜಶೇಖರ್ ಮಾತನಾಡಿ, ಪದ್ಯ ಸಾರಾಂಶ ಪತ್ರ ಪ್ರಬಂಧ ವ್ಯಾಕರಣಾಂಶಗಳನ್ನು ಪುನರಾವರ್ತನೆ ಮಾಡಬೇಕು ಎಂದರು.

ವಿಜ್ಞಾನ ವಿಷಯ ಪರಿವೀಕ್ಷಕ ಬಸವಂತಯ್ಯ ಮಾತನಾಡಿ, ಮಿಷನ್ 40 ಅನುಷ್ಠಾನಕ್ಕೆ ಹೆಚ್ಚು ಆದ್ಯತೆ ನೀಡಬೇಕು. ವಿಜ್ಞಾನದಲ್ಲಿ ಬರುವ ಚಿತ್ರಗಳು ವ್ಯತ್ಯಾಸ ರಾಸಾಯನಿಕ ಸಮೀಕರಣ ಸರಿದೂಗಿಸುವುದು ಮೊದಲಾದ ವಿಷಯಗಳನ್ನು ಹೆಚ್ಚು ಕಲಿಸಿರಿ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಮಾತನಾಡಿ, ಈ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಪ್ರಗತಿ ಸಾಧಿಸಲು ಕೈಗೊಂಡ ಕಾರ್ಯಗಳು ಚಟುವಟಿಕೆಗಳ ಬಗ್ಗೆ ತಿಳಿಸಿದರು.

ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ.ಎಂ. ಕಾಂತೇಶ್, ಉಪ ಪ್ರಾಂಶುಪಾಲ ರವೀಂದ್ರನಾಥ ಬಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಹಣ್ಣಿ ನರೇಶ್ ನಿರ್ವಹಿಸಿದರು.

ತಾಲೂಕಿನ ಸರ್ಕಾರಿ ಅನುದಾನಿತ ಅನುದಾನ ರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು.