ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಲಿ: ಎಂ.ಐ. ರಡ್ಡೇರ

| Published : Feb 15 2024, 01:35 AM IST

ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಲಿ: ಎಂ.ಐ. ರಡ್ಡೇರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ನೇರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಗದಗ: ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬುಧವಾರ ನಡೆದ ೩ನೇ ದಿನದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ನೇರ ಕಾರ್ಯಕ್ರಮದಲ್ಲಿ ಹೆಚ್ಚು ಮಕ್ಕಳು ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನಡೆಯಿತು.ಹಿಂದಿ ಭಾಷೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು, ಉತ್ಸಾಹದಿಂದ ಪದ್ಯದ ಸಾರಾಂಶ ಬರೆಯುವ ಬಗ್ಗೆ, ಪ್ರಬಂಧ ಬರೆಯುವ ಬಗ್ಗೆ, ನಾಲ್ಕು ಅಂಕದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು? ಪತ್ರ ಲೇಖನ ಬರೆಯುವ ಕೌಶಲ್ಯ, ವ್ಯಾಕರಾಣಾಂಶಗಳ ಬಗ್ಗೆ, ನೂರಕ್ಕೆ ನೂರು ಅಂಕ ಗಳಿಸುವುದು ಹೇಗೆ? ಮುಂತಾದ ತಮ್ಮ ಸಂದೇಹಗಳಿಗೆ ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಕಂಡುಕೊಂಡರು.

ಈ ವೇಳೆ ಜಿಲ್ಲಾ ಉಪನಿರ್ದೇಶಕ ಎಂ.ಐ. ರಡ್ಡೇರ ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾಗಿರಬೇಕು, ಕೇಳುವ, ನೋಡುವ, ತಿಳಿದುಕೊಳ್ಳುವ, ಆಲೋಚಿಸುವ ಗ್ರಹಣ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿ ಮಾನವನಲ್ಲಿ ರುಚಿ ತಿಳಿದುಕೊಳ್ಳುವ ಶಕ್ತಿ ಎಂದರೆ ಪಂಚೇಂದ್ರಿಯಗಳ ಜ್ಞಾನ ಇರುವುದರಿಂದ ನಾವು ಓದಬೇಕು. ವಿದ್ಯಾರ್ಥಿಗಳೇ, ನಿಮ್ಮಲ್ಲಿ ಸೂಕ್ತ ಪ್ರಜ್ಞೆ, ಅಪಾರ ಪ್ರಜ್ಞೆ, ಅದ್ಭುತವಾದ ಜ್ಞಾನವಿದೆ. ಪ್ರಶ್ನೆಗಳಿಗೆ ಮೌಲ್ಯಯುತ, ಅಗತ್ಯವಾಗಿರುವುದನ್ನು ಉತ್ತರವನ್ನು ಬರೆಯಬೇಕು. ನಿಮ್ಮ ಉತ್ತರವನ್ನು ಮೌಲ್ಯ ಮಾಪಕರು ನೋಡಿದಾಗ ಸಂತೋಷವಾಗಬೇಕು. ಅವರು ಒಪ್ಪುವ ಹಾಗೂ ಸರಿ ಎನ್ನುವ ರೀತಿಯಲ್ಲಿರಬೇಕು ಎಂದು ಫೋನ್ ಇನ್ ನೇರ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚುಹೆಚ್ಚಾಗಿ ಓದಬೇಕು, ಬರೆಯಬೇಕು, ಏನನ್ನು ತಿಳಿದುಕೊಳ್ಳಬೇಕು, ಯಾವ ರೀತಿ ತಿಳಿದುಕೊಳ್ಳಬೇಕು ಎಂದು ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಓದಿದ ಮತ್ತು ಬರೆದ ವಿಷಯವನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು, ಅಕ್ಷರಗಳನ್ನು ಹೇಗೆ ದುಂಡಾಗಿ ಬರೆಯಬೇಕು ಎಂಬುದನ್ನು ಆಲೋಚಿಸಬೇಕು. ಆರೋಗ್ಯವನ್ನು ಹೇಗೆ ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಯೋಚಿಸಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಸರಿಯಾಗಿ ಸೇವಿಸಬೇಕು. ಪರೀಕ್ಷೆ ಭಯ ದೂರಮಾಡಿ ಸಂಭ್ರಮಿಸಬೇಕು, ಒತ್ತಡದಿಂದ ಆದಷ್ಟು ಮುಕ್ತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿಂದಿ ಭಾಷೆಯ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಪರೀಕ್ಷೆ ಮುಗಿಯುವರೆಗೆ ಸತತ ಬೆಂಬಲದ ಭರವಸೆ ನೀಡಿದರು. ಕೇವಲ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತ್ರವಲ್ಲ, ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಮಕ್ಕಳು ತಾವು ಓದುವಾಗ, ಬರೆಯುವಾಗ ಏನಾದರೂ ಗೊಂದಲಗಳು ಅಥವಾ ಸಂದೇಹಗಳು ಕಂಡು ಬಂದಲ್ಲಿ ಪ್ರತಿದಿನ ಸಂಜೆ ೫.೩೦ರಿಂದ ೬.೩೦ರೊಳಗೆ ಈಗಾಗಲೇ ನೀಡಿದಂತಹ ಸಂಪನ್ಮೂಲ ಶಿಕ್ಷಕರಿಗೆ ದೂರವಾಣಿ ಮೂಲಕ ಫೋನ್ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಂಪನ್ಮೂಲ ಶಿಕ್ಷಕರಾಗಿ ವಿ.ಐ. ಕುಲಕರ್ಣಿ, ವಂದನಾ ಮಿಸಾಳ, ಎಸ್.ಎಸ್. ಮುಧೋಳ, ಲತಾ ಕಾಲವಾಡ, ಮಾರ್ಗರೇಟ್ ಕಿತ್ತೂರ, ಎ.ಆರ್. ಮಲ್ಲನಕೇರಿ, ಎಚ್.ಎ. ಫಾರೂಕಿ, ಶ್ಯಾಮ ಲಾಂಡೆ, ಐ.ಬಿ. ಮಡಿವಾಳರ, ಪಿ.ಡಿ. ಮಂಗಳೂರ, ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಕೊಟ್ರೇಶ ಮೆಣಸಿನಕಾಯಿ, ಕೆ.ಎಂ. ಗೌಡರ ಹಾಗೂ ನಾಗರಾಜ ಗಾಳಿ ಇದ್ದರು.