ಸಾರಾಂಶ
ಕನ್ನಡಪ್ರಭ ವಾರ್ತೆ ಕೆರೂರ
ಸಿಎಂ ಸಿದ್ದರಾಮಯ್ಯನವರು ಬಾದಾಮಿ ಶಾಸಕರಿದ್ದಾಗ ಡಾ.ಅಂಬೇಡ್ಕರ್ ವಸತಿ ಶಾಲೆಯನ್ನು ಮುಷ್ಟಿಗೇರಿಗೆ ಮಂಜೂರು ಮಾಡಿಸಿ ಅಡಿಗಲ್ಲನಿಟ್ಟು ಹೋಗಿದ್ದರು. ಇಂದು ನೂತನ ಕಟ್ಟಡದ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆಯಿಂದ ಮುಷ್ಟಿಗೇರಿಯಲ್ಲಿ ಭಾನುವಾರ ಆಯೋಜಿಸಿದ ಡಾ.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 20 ಕೋಟಿ ರು. ವೆಚ್ಚದ ವಸತಿ ಶಾಲೆ ಹಾಗೂ ನುರಿತ ಶಿಕ್ಷಕರನ್ನು ಒದಗಿಸಿದ್ದು ಯುವ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪ್ರಯತ್ನದ ಫಲವು ಇದಾಗಿದೆ. ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಯವರ ಗಟ್ಟಿ ನಾಯಕತ್ವ ಅವರ ಜನಪರ ಸೇವೆ ಭೀಮಸೇನ ಕೂಡಾ ಮುಂದುವರಿಸಲಿ ಎಂಬ ಆಶಯ ನನ್ನದಾಗಿದೆ ಎಂದು ಶಾಸಕರಿಗೆ ಶುಭ ಹಾರೈಸಿದರು.
ಕ್ಷೇತ್ರದ ಜನ ಅವರೊಂದಿಗಿದ್ದು ಅವರ ಉತ್ತಮ ಸೇವೆ ಬಳಕೆ ಮಾಡಿಕೊಳ್ಳಬೇಕು. ಇಂದು ನನಗೆ ಅನೇಕ ಮದುವೆ ಕರೆಗಳಿದ್ದವು. ಭೀಮಸೇನರ ಒತ್ತಾಸೆಗೆ ವಿದ್ಯಾಮಂದಿರಕ್ಕೆ ಬಂದ ಖುಷಿ ನನ್ನದಾಗಿದೆ. ನನ್ನ ಕ್ಷೇತ್ರದ ಮೆಳ್ಳಿಗೆರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಬಂದಿದ್ದು, ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳೂ ವಿದ್ಯೆಯಲ್ಲಿ ಮುಂದಿದ್ದಾರೆಂದರೆ ಹೆಮ್ಮೆ ಪಡಬೇಕು. ಈ ಶಾಲೆಯಲ್ಲಿ ಕಲಿಯುವ ಮಕ್ಕಳೂ ಮುಂದೊಂದು ದಿನ ವಿದ್ಯೆಯಲ್ಲಿ ಸಾಧನೆ ಮಾಡಬೇಕೆಂದರು. ನಾನು ಶಾಲೆ ಕಲಿಯುವಾಗ ಹಿಂದಿ ಶಿಕ್ಷಕರಿಗೆ ಕೀಟಲೆ ಮಾಡುತ್ತಿದ್ದೆ, ಶಿಕ್ಷಕರ ಮಹತ್ವ ಗೊತ್ತಿರಲಿಲ್ಲ. ನಾನು ಶಾಸಕ, ಸಚಿವನಾಗಿ ದಿಲ್ಲಿಗೆ ಭೇಟಿ ನೀಡಿದಾಗ ಹಿಂದಿ ಮಾತನಾಡುವ ಪ್ರಸಂಗ ಒದಗಿದಾಗ ಶಿಕ್ಷಣದ ಮಹತ್ವ ತಿಳಿಯಿತು. ನನ್ನ ಸಹಾಯಕ್ಕೆ ಪಿಎ ಬರಬೇಕಾಯಿತು. ದಯವಿಟ್ಟು ವಿದ್ಯಾರ್ಥಿಗಳು ಶಿಕ್ಷಕರಿಗೆ ಕೀಟಲೆ ಮಾಡದೆ ಶಿಕ್ಷಕರು ಹೇಳುವ ಪಾಠ ಕಲಿತು ಭವಿಷ್ಯದ ದೇಶ ಕಟ್ಟುವ ನಾಯಕರಾಗಬೇಕೆಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, 250 ವಿದ್ಯಾರ್ಥಿಗಳಿಗೆ ಜೀವನ ರೂಪಿಸುವ ಭವ್ಯ ವಿದ್ಯಾಮಂದಿರ ನಿರ್ಮಾಣವಾಗಿದ್ದು ಇದರ ಗೌರವ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ಅನ್ನ, ವಸತಿ, ಶಿಕ್ಷಣ ಇದ್ದರೆ ಅದು ಸಮೃದ್ಧ ನಾಡಾಗುತ್ತದೆಂದು ನನ್ನ ತಂದೆ ಬಿ.ಬಿ.ಚಿಮ್ಮನಕಟ್ಟಿ ಹಾಗೂ ತಾಯಿ ರತ್ನಕ್ಕ ನನಗೆ ಹೇಳಿದ ಪಾಠ. ನಾನು ಬಡತನ ಹಾಗೂ ಸಿರಿತನ ಕಂಡಿದ್ದೇನೆ. ನನಗೆ ಜನಸಾಮಾನ್ಯರ ಅಗತ್ಯಗಳ ಅರಿವಿದೆ. ರೈತಾಪಿ ಜನ ಈ ಕಟ್ಟಡ ನೋಡಬೇಕು. ನಮ್ಮ ಮಕ್ಕಳನ್ನು ಇದೆ ಶಾಲೆಗೆ ಕಳಿಸಬೇಕೆಂಬ ಹಂಬಲ ಮೂಡಬೇಕು. ಈ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಚಿವ ಎಚ್.ಸಿ.ಮಹಾದೇವಪ್ಪರಿಗೆ ಧನ್ಯವಾದ ಅರ್ಪಿಸುತ್ತೇನೆಂದ ಶಾಸಕರು, ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಮಕ್ಕಳ ಓದು ಪಾಲಕರಿಗೆ ಖುಷಿ ತರುವಂತಿರಬೇಕೆಂದರು.
ಗ್ರಾಪಂ ಅಧ್ಯಕ್ಷ ಹನಮಂತ ಸಿದ್ದಣ್ಣವರ, ಈರಣ್ಣ ಕರಿಗೌಡ್ರ ಮಾತನಾಡಿದರು. ವೇದಿಕೆಯಲ್ಲಿ ಬಸವರಾಜ ಬ್ಯಾಹಟ್ಟಿ, ಮಹಾಂತೇಶ ಹಟ್ಟಿ, ಶಿವಾನಂದ ಕೊನೇರಿ, ಅಂದಾನಗೌಡ ಪಾಟೀಲ, ಶಿವಾನಂದ ಬೊಮ್ಮಣ್ಣವರ ಸೇರಿದಂತೆ ಅನೇಕ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ವೈ.ಎಚ್ ಗೌಜಲಗಿ, ರವಿ ಬೇಲೂರ, ಗುರು ಮಾತೆಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.