ಸಾರಾಂಶ
ಗದಗ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ ತನ್ನ ಜೀವನದಲ್ಲಿ ಒಬ್ಬಉತ್ತಮ ಆದರ್ಶ ವಿದ್ಯಾರ್ಥಿಯಾಗುತ್ತಾನೆ. ವಿಶೇಷ ಶಿಬಿರ ಏರ್ಪಡಿಸಿದಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡಿರುತ್ತಾನೆ. ಇದರಿಂದ ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ರಜಿಸ್ಟರ್ ಡಾ.ಸುರೇಶ್. ಬಿ.ನಾಡಗೌಡರ್ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪವರ್ಮೆಂಟ್ ಮತ್ತು ಸ್ಪೋರ್ಟ್ಸ್ ರಾಜ್ಯ ಎನ್ಎಸ್ಎಸ್ ಕೋಶನ್ ರೀಜನಲ್ ಡೈರೆಕ್ಟರ್ ಆಫ್ ಎನ್.ಎಸ್.ಎಸ್ ಬೆಂಗಳೂರು, ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ, ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಐಕ್ಯೂಎಸಿಯಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಸಾಂಸ್ಕೃತಿಕ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಬ್ಬ ವ್ಯಕ್ತಿ ತನ್ನ ಪ್ರತಿಭೆ ಹೊರಹಾಕಲು ವೇದಿಕೆಗಾಗಿ ಕಾಯುತ್ತಿರುತ್ತಾನೆ. ಅಂತಹ ವಿದ್ಯಾರ್ಥಿಗಳಿಗೆ ಈ ದಿನದ ಕಾರ್ಯಕ್ರಮ ಬಹಳಷ್ಟು ಮುಖ್ಯವಾಗಿದೆ. ಯುವಕರು ಈ ದೇಶದ ಬೆನ್ನೆಲುಬು ಹೀಗಾಗಿ ನಮ್ಮ ಮೂಲ ಸಂಸ್ಕೃತಿಕ ಕಲೆ ಉಳಿಸಿ ಬೆಳೆಸುವ ಕಾರ್ಯ ತಮ್ಮದಾಗಿದೆ. ವೇದಿಕೆ ಉಪಯೋಗಿಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ಸಂಸ್ಥೆಯ ಚೇರಮನ ಆನಂದ್ ಪೋತ್ನಿಸ್ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ನಿಮಿತ್ತ ನಮ್ಮ ಸಂಸ್ಥೆಯ ಆವರಣದಲ್ಲಿ ಬೇರೆ ಬೇರೆ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುತ್ತಿರುವುದು ಬಹಳಷ್ಟು ಸಂತಸ ತಂದಿದೆ.ಇಂತಹ ಅತ್ಯುತ್ತಮ ಕಾರ್ಯಕ್ರಮಗಳಿಗೆ ಸಂಸ್ಥೆ ಸದಾ ತಮಗೆ ಸಹಕಾರ ನೀಡುತ್ತದೆ ಎಂದರು.ಈ ವೇಳೆ ಪ್ರಾ. ಪ್ರೊ.ಕೆ. ಗಿರಿರಾಜ ಕುಮಾರ್, ಉಪ ಪ್ರಾ.ಡಾ.ವಿ.ಟಿ. ನಾಯ್ಕರ್, ಪ್ರೊ.ಪ್ರಶಾಂತ್.ಎಚ್.ಮೇರವಾಡಿ, ಪ್ರೊ.ಬಾಹುಬಲಿ ಜೈನರ, ಮನೋಜ್ ದಲಬಂಜನ್ ಹಾಗೂ ಬೇರೆ ಬೇರೆ ರಾಜ್ಯಗಳ ಕಾರ್ಯಕ್ರಮ ಅಧಿಕಾರಿಗಳು ಇದ್ದರು.
ಈ ಒಂದು ರಾಷ್ಟ್ರಮಟ್ಟದ ಶಿಬಿರದಲ್ಲಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹೀಗೆ 6 ರಾಜ್ಯಗಳ ಸೇವಕರು ಹಾಗೂ ರಾಜ್ಯದ 8 ವಿಶ್ವವಿದ್ಯಾಲಯದ ಸ್ವಯಂಸೇವಕರು ಒಟ್ಟು 120 ಸ್ವಯಂಸೇವಕ, ಸೇವಕಿಯರು ತಮ್ಮ ತಮ್ಮ ರಾಜ್ಯದ ಮೂಲ ಕಲೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ 10 ರಾಜ್ಯಗಳಿಂದ ಆಗಮಿಸಿದ ಕಾರ್ಯಕ್ರಮ ಅಧಿಕಾರಿಗಳನ್ನು ಆದರ್ಶ ಶಿಕ್ಷಣ ಸಮಿತಿಯಿಂದ ಗೌರವಿಸಲಾಯಿತು.