ಭವ್ಯ ಭಾರತದ ಕನಸು ನನಸಾಗಿಸಲು ವಿದ್ಯಾರ್ಥಿಗಳು ಪಣತೊಡಲಿ: ಪ್ರೊ. ಸುರೇಶ ಎಚ್ ಜಂಗಮಶೆಟ್ಟಿ

| Published : Jan 11 2024, 01:30 AM IST / Updated: Jan 11 2024, 03:00 PM IST

ಭವ್ಯ ಭಾರತದ ಕನಸು ನನಸಾಗಿಸಲು ವಿದ್ಯಾರ್ಥಿಗಳು ಪಣತೊಡಲಿ: ಪ್ರೊ. ಸುರೇಶ ಎಚ್ ಜಂಗಮಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭವ್ಯ ಭಾರತದ ಕನಸನ್ನು ನನಸು ಮಾಡಲು ವಿದ್ಯಾರ್ಥಿಗಳು ಪಣತೊಡಬೇಕು, ಜಾತಿ, ಧರ್ಮ ಮೀರಿದ ಸಾಧನೆ ನಮ್ಮದಾಗಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಎಚ್ ಜಂಗಮಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಭವ್ಯ ಭಾರತದ ಕನಸನ್ನು ನನಸು ಮಾಡಲು ವಿದ್ಯಾರ್ಥಿಗಳು ಪಣತೊಡಬೇಕು, ಜಾತಿ, ಧರ್ಮ ಮೀರಿದ ಸಾಧನೆ ನಮ್ಮದಾಗಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಎಚ್ ಜಂಗಮಶೆಟ್ಟಿ ಹೇಳಿದರು.

ಪಟ್ಟಣದ ಸಹಕಾರಿ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಎಂಕಾಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಸಾಧನೆ ಮಾಡದಿದ್ದರೂ ತಂದೆ-ತಾಯಿ, ಗುರುಗಳಿಗೆ ಗೌರವ ಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಅದು ನಮ್ಮನ್ನು ಕೈಹಿಡಿದು ಮುನ್ನಡೆಸುತ್ತದೆ. ಇದರೊಂದಿಗೆ ಶಿಸ್ತು, ಸನ್ನಡತೆ, ಸನ್ಮಾರ್ಗ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ನಾವು ಉನ್ನತ ಮಟ್ಟಕ್ಕೇರಬಹುದು. 

ಗ್ರಾಮೀಣ ಪ್ರದೇಶದಲ್ಲಿ ಇಂತಹ ಉನ್ನತ ಸಂಸ್ಥೆಗಳು ತಲೆ ಎತ್ತಿ ಬಡಮಕ್ಕಳಿಗೆ ಕೈಗೆ ನಿಲುಕದ ಸ್ನಾತಕೋತ್ತರ ಪದವಿ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸುವಂತಹ ಶಕ್ತಿ ಪಡೆದುಕೊಂಡು ಸಮರ್ಥರಾಗಬೇಕೆಂದು ಕರೆ ನೀಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಗದೀಶ ತಂಬಾಕದ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದುಕೊಳ್ಳುವಾಗ ಶಿಕ್ಷಣ ಸಂಸ್ಥೆಗಳ ಲೋಪವನ್ನು ಕಡೆಗಣಿಸಿ ಇರುವ ಶೈಕ್ಷಣಿಕ ವ್ಯವಸ್ಥೆಯಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಕಲ್ಪವಿದ್ದಾಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯವಾಗುತ್ತದೆ. 

ಅಧ್ಯಯನದ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅದರಲ್ಲಿ ಯಶಸ್ಸು ಗಳಿಸುವಂತಹ ಪ್ರಯತ್ನ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಪಾಟೀಲ ಮಾತನಾಡಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆ ಆವಿಷ್ಕಾರಗಳೊಂದಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. 

ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲರೂ ಸಮರ್ಥರೇ ಆದರೆ ಆ ಸಾಮರ್ಥ್ಯವನ್ನು ಸಾಮಾಜಿಕವಾಗಿ ಪ್ರದರ್ಶಿಸುವ ಎದೆಗಾರಿಕೆ ಹಾಗೂ ಕಲೆಗಾರಿಕೆ ಕೇವಲ ಕೆಲವರಿಗೆ ಮಾತ್ರ ಸಾಧ್ಯ. 

ತಂದೆ-ತಾಯಿಗಳು ಶ್ರಮ ಜೀವಿಗಳಾಗಿ ತಮ್ಮ ಮಕ್ಕಳ ಜ್ಞಾನಾರ್ಜನೆಗಾಗಿಯೇ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರ ಶ್ರಮವನ್ನು ಸಾರ್ಥಕಗೊಳಿಸುವುದು ಪ್ರತಿಯೊಬ್ಬ ವಿದ್ಯಾಥಿಯ ಕರ್ತವ್ಯವಾಗಿದೆ ಎಂದರು.

ಸಮಾರಂಭದಲ್ಲಿ ಎಸ್. ವೀರಭದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ. ಎಸ್.ಬಿ. ಚನ್ನಗೌಡ್ರ ಸ್ವಾಗತಿಸಿದರು. ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಪಿ. ಹಳ್ಳೇರ ಹಾಗೂ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಸಿ.ಆರ್. ದೂದೀಹಳ್ಳಿ, ನಾಗರಾಜ ಎಚ್.ಪಿ., ನವೀನ ಯಲಿಗಾರ, ಬಿ.ಎಸ್. ನಾಯ್ಕರ, ತ್ರಿವೇಣಿ ಕೋರಿ, ಕಿರಣ ಬಾಗಲರ, ಪಿ.ಎಂ. ವಿಜಯಕುಮಾರ, ಪ್ರವೀಣ ಕೂರ್ಗೇರ, ಪ್ರಿಯಾ.ಇಂಡಿ, ಕವಿತಾ ಅಣಜಿ, ಎಸ್.ಎಸ್. ಹುಲ್ಲಿನಕೊಪ್ಪ, ಪೂರ್ಣಿಮಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.