ಸಾರಾಂಶ
ಶಿವಮೊಗ್ಗ: ನಾವು ನೀಡುವ ಶಿಕ್ಷಣ ಹೃದಯದ ಮೂಲಕ ಮಸ್ತಕ ತಲುಪಬೇಕಾಗಿದ್ದು, ಆಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಬುಧವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಾಂಸ್ಕೃತಿಕ, ಕ್ರೀಡಾ ವಿಭಾಗಗಳ ಕಾರ್ಯಚಟುವಟಿಕೆಗಳ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವಿಷ್ಯದ ಜೀವನದಲ್ಲಿ ತೊಡಗಿಸಿಕೊಳ್ಳುವಾಗ ಇನ್ನೊಬ್ಬರ ಸಂತೋಷ ಬರೆಯುವ ಪೆನ್ಸಿಲ್ ನೀವಾಗುವುದಕ್ಕಿಂತ, ನೋವನ್ನು ಅಳಿಸುವ ರಬ್ಬರ್ ನೀವಾಗಿ. ಹಣ ನಮಗೆ ಧೈರ್ಯ ಕೊಡಬಹುದು, ತೃಪ್ತಿ ಅಲ್ಲ. ನಮ್ಮ ಸಂಸ್ಕೃತಿ, ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವತೆ ಕಳೆದುಕೊಳ್ಳತ್ತಾ ಹೋಗುತ್ತದೆ ಎಂದರು.ಮನುಷ್ಯ ಮಾತನಾಡುವುದನ್ನು ಕಲಿಯಲು ಬಾಲ್ಯ ಬೇಕು. ಅದರೆ, ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂಬುದು ಜೀವನಪೂರ್ತಿ ಕಲಿಯಲು ಸಾಧ್ಯವಾಗುವುದಿಲ್ಲ. ಧೃಢವಾದ ಶ್ರದ್ಧೆ ಹೊಂದಿದ ವಿದ್ಯಾಭ್ಯಾಸ ಬಹಳ ಮುಖ್ಯ. ಸದ್ದಿಲ್ಲದೆ ಶ್ರಮಿಸಿ ನಂತರ ನಿಮ್ಮ ಯಶಸ್ಸು ಸದ್ದು ಮಾಡುತ್ತದೆ ಎಂದರು.
ಒಂಟಿತನವೆಂಬುದು ಇಂದಿನ ಸಮಾಜ ಎದುರಿಸುತ್ತಿರುವ ಬಹುದೊಡ್ಡ ರೋಗವಾಗಿದೆ. ಕೂಡು ಕುಟುಂಬದ ಸಂಸ್ಕೃತಿಯ ಕಣ್ಮರೆ ಇಂತಹ ದುಸ್ಥಿತಿಗೆ ಕಾರಣವಾಗಿದೆ. ಜಗತ್ತಿನಲ್ಲಿ ಅತ್ಯಂತ ದುಬಾರಿ ವಸ್ತುಗಳೆಂದರೆ, ಅಪ್ಪನ ಹೆಗಲು ಮತ್ತು ಅಮ್ಮನ ಮಡಿಲು ಮಾತ್ರ. ಆಸೆಯ ಬೆನ್ನಿಗಿಂತ ಆದರ್ಶದ ಬೆನ್ನು ಹತ್ತಿ ಎಂದು ಹೇಳಿದರು.ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವರ್ಷ ಪೂರ್ತಿ ನಡೆಸಿದ ಕ್ರಿಯಾಶೀಲ ಚಟುವಟಿಕೆಗಳನ್ನು ಮೆಲುಕು ಹಾಕಲು ಹಾಗೂ ಶೈಕ್ಷಣಿಕ ಅಧ್ಯಯನದಲ್ಲಿ ಮತ್ತಷ್ಟು ಕ್ರಿಯಾಶೀಲಗೊಳ್ಳಲು ಇಂತಹ ಕಾರ್ಯಕ್ರಮ ಪೂರಕವಾಗಲಿದೆ. ಇಷ್ಟದ ಓದು ಮನಸ್ಸಿನಲ್ಲಿ ಸದಾ ಉಳಿಯುವ ಜ್ಞಾನ. ಪಠ್ಯೇತರ ಚಟುವಟಿಕೆಗಳು ಬೇಕು ಬೇಡವೆಂಬ ಗೊಂದಲ ಕೆಲವು ವಿದ್ಯಾರ್ಥಿಗಳು ಪೋಷಕರಲ್ಲಿ ಸಹಜ. ಇಂತಹ ಗೊಂದಲಗಳಿಂದ ಹೊರಬನ್ನಿ. ಜೀವನ ಮುನ್ನಡೆಸುವ ನಿಜವಾದ ವಿದ್ಯೆ ಸಿಗುವುದು ಪಠ್ಯೇತರ ಚಟುವಟಿಕೆಗಳಿಂದ ಎಂಬುದು ನೆನಪಿನಲ್ಲಿಡಬೇಕು ಎಂದರು.
ಯುವಸಮೂಹ ನಮ್ಮ ಸಂಸ್ಕ್ರತಿಯ ರಾಯಭಾರಿಗಳು. ಪ್ರತಿಯೊಬ್ಬ ವಿದ್ಯಾರ್ಥಿಯ ಸೂಪ್ತ ಪ್ರತಿಭೆಯನ್ನು ಹೊರಗೆ ತಂದು, ಅದನ್ನು ಸಮಾಜಮುಖಿಯಾಗಿ ಬಳಕೆಯಾಗುವಂತೆ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ. ಪಿಯುಸಿ ಕಾಲಘಟ್ಟ ಶಿಕ್ಷಣದ ಪರ್ವ ಕಾಲ. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆಯೆ, ಬದುಕಿನ ಆದ್ಯತೆಗಳ ಸ್ಪಷ್ಟನೆಯೊಂದಿಗೆ ಜವಾಬ್ದಾರಿಯುತ ನಡೆ ನಿಮ್ಮದಾಗಲಿ ಎಂದು ಆಶಿಸಿದರು.ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಎನ್ಇಎಸ್ ನಿರ್ದೇಶಕ ಎಚ್.ಸಿ.ಶಿವಕುಮಾರ್, ಕಸ್ತೂರಬಾ ಪ್ರೌಢಶಾಲೆಯ ಉಪಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಶಾಯಿಸ್ತಾ ರಿಯಾಜ್, ಕಾರ್ಯದರ್ಶಿ ಶಾಲಿನಿ, ಉಪನ್ಯಾಸಕ ಎಸ್.ಬಿ.ಜ್ಯೋತಿ, ತಾರಾದೇವಿ, ಡಿ.ಎಚ್.ರಾಘವೇಂದ್ರ, ಎಸ್.ಎಚ್.ರವಿಕುಮಾರ್, ಎಸ್.ವಿ.ಸುಮಾ, ರುಕ್ಸಾನ ಖಾನಂ, ಶ್ವೇತಾ, ಮಮತ, ಆಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಹೇಮಾ ಪ್ರಾರ್ಥಿಸಿದರು. ಹಸ್ನಾಖಾನಂ ಸ್ವಾಗತಿಸಿದರು. ರಶ್ಮಿಕಾ ವಂದಿಸಿದರು. ರಮ್ಯ ಮತ್ತು ನಂದಿತಾ ನಿರೂಪಿಸಿದರು.