ಹೊಸಪೇಟೆ: ವಿದ್ಯಾರ್ಥಿಗಳು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಆಂಧ್ರಪ್ರದೇಶದ ನೆಲ್ಲೂರಿನ ಆರ್‌ಐಇಎನ್‌ಸಿಇಆರ್‌ಟಿ ಸಹ ಪ್ರಾಧ್ಯಾಪಕ ಡಾ.ಪ್ರಕಾಶ ಬಡಿಗೇರ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುಜಿಸಿ ನೆಟ್, ಜೆಆರ್‌ಎಫ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮಕನಸುಗಳು ಹಾಗೂ ಭರವಸೆಗಳನ್ನು ಸಾಕಾರಗೊಳಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಯಾವುದೇ ರೀತಿಯ ಭಯಕ್ಕೆ ಒಳಗಾಗದೆ ನಿರಂತರ ಅಧ್ಯಯನ ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪೂರಕವಾಗುವ ಇಂತಹ ಕಾರ್ಯಾಗಾರಗಳು ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಧಾರವಾಡದ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಭೀಮೇಶ ಯರಡೋಣಿ ಮಾತನಾಡಿ, ವಿದ್ಯಾರ್ಥಿಗಳು ತಾವು ಯಾವ ವಿಷಯದಲ್ಲಿ ಹೆಚ್ಚು ಪರಿಣತಿ ಹೊಂದಿದ್ದಾರೆ ಹಾಗೂ ಯಾವ ವಿಷಯದಲ್ಲಿ ದುರ್ಬಲರಾಗಿದ್ದಾರೆ ಎಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು ಎಂದರು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಇಂದಿನ ಜಗತ್ತು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಪ್ರತಿಭೆ ಮತ್ತು ಪರಿಶ್ರಮ ಹೊಂದಿರುವವರಿಗೆ ಅವಕಾಶಗಳ ಕೊರತೆಯಿಲ್ಲ ಎಂದು ಹೇಳಿದರು. ಉನ್ನತ ಶಿಕ್ಷಣವು ವ್ಯಕ್ತಿಯ ಜೀವನದ ಬೆಳವಣಿಗೆಗೆ ಮಾತ್ರವಲ್ಲದೆ ದೇಶದ ಸಮಗ್ರ ಅಭಿವೃದ್ಧಿಗೂ ಅಗತ್ಯವಾಗಿದೆ ಎಂದರು.ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಮತ್ತು ಸಂಪನ್ಮೂಲ ವ್ಯಕ್ತಿ ಡಾ.ಸುಷ್ಮಾ ಜೋಗನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರವಿಚಂದ್ರ ಕೆ. ನಿರೂಪಿಸಿದರು. ವಿದ್ಯಾರ್ಥಿ ಡಾ. ಅನುಸೂಯ ಡಿ. ವಂದಿಸಿದರು. ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಆಡಳಿತ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ಪರೀಕ್ಷಾರ್ಥಿಗಳು ಇದ್ದರು.