ಶಿಕ್ಷಕರು ಸಮಾಜಕ್ಕೆ ಆದರ್ಶವಾಗಲಿ: ಡಾ. ಸುರೇಶ

| Published : Sep 10 2024, 01:32 AM IST

ಸಾರಾಂಶ

ಶಿಕ್ಷಕರ ಪ್ರಮುಖ ಕೆಲಸ ಅಧ್ಯಯನ ಆಗಿರಬೇಕು. ಶಿಕ್ಷಕರ ವೃತ್ತಿ ಪುಣ್ಯದ ವೃತ್ತಿ ಎಂದು ಆಯ್ದುಕೊಳ್ಳಬೇಕು.

ಅಂಕೋಲಾ: ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೂಲಕ ದೇಶ ಕಟ್ಟುವ ಶಿಲ್ಪಿಯಾಗಬೇಕು. ಸಮಾಜದ ವಿವಿಧ ಸಮಸ್ಯೆಯನ್ನು ಪರಿಹರಿಸಿ ದೇಶದ ಮಣ್ಣಿನ ಮಹತ್ವವನ್ನು ಹೆಚ್ಚಿಸಬೇಕು. ಶಿಕ್ಷಕರ ನಡೆ- ನುಡಿ ಒಂದೇ ಆಗಿದ್ದು, ಸಮಾಜದ ಮುಂದೆ ಆದರ್ಶನಾಗಿರಬೇಕು ಎಂದು ಕುಮಟಾದ ದಂತ ವೈದ್ಯ ಡಾ. ಸುರೇಶ ತಿಳಿಸಿದರು.

ಕೆಎಲ್ಇ ಸಮೂಹ ಸಂಸ್ಥೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರಿನ ಪ್ರಶಿಕ್ಷಣ ಭಾರತಿ ಉತ್ತರ ಕನ್ನಡ ಜಿಲ್ಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಪ್ರಮುಖ ಕೆಲಸ ಅಧ್ಯಯನ ಆಗಿರಬೇಕು. ಶಿಕ್ಷಕರ ವೃತ್ತಿ ಪುಣ್ಯದ ವೃತ್ತಿ ಎಂದು ಆಯ್ದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ ಮಕ್ಕಳ ಅಂತರ್ಗತ ಶಕ್ತಿಯನ್ನು ಹೊರಹಾಕುವಂತೆ ಶಿಕ್ಷಣದ ವಿವಿಧ ಆಯಾಮವನ್ನು ಬಳಸಿಕೊಂಡು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಿ ನಾಯಕ ಸ್ಥಾನದಲ್ಲಿರಬೇಕು ಎಂದರು.

ಬಿಇಡಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಾಷ್ಟ್ರೋತ್ಧಾನ ಬೆಂಗಳೂರು ಪ್ರಶಿಕ್ಷಣ ಭಾರತಿ ಉತ್ತರ ಕನ್ನಡ ಜಿಲ್ಲೆ ಸಂಯೋಜಕ ಅಭಿಷೇಕ ಸ್ವಾಗತಿಸಿದರು. ಒಂದು ದಿನದ ತರಬೇತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ ಕುರಿತು ಮಾಜಿ ಎಂಎಲ್‌ಸಿ ಅರುಣ ಶಹಾಪುರ, ಹುಬ್ಬಳ್ಳಿಯ ಕೇಶವಕುಂಜದ ರವೀಂದ್ರ ಕೇಶವಕುಂಜ ಅವರು ಭಾರತೀಯ ಜ್ಞಾನ ಪರಂಪರೆ ಕುರಿತು, ಪಂಚಮುಖಿ ಶಿಕ್ಷಣದ ಮೇಲೆ ರಾಷ್ಟ್ರೋತ್ಥಾನ ಶಾಲೆಗಳ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿನಾಯಕ ಭಟ್ಟ ಶೇಡಿಮನೆ ಹಾಗೂ ಆದರ್ಶ ಶಿಕ್ಷಕರ ಮೇಲೆ ನಿವೃತ್ತ ಪ್ರಾಧ್ಯಾಪಕ ಡಾ. ಗಜಾನನ ಭಟ್ಟ ತರಬೇತಿ ನೀಡಿದರು. ಉಪನ್ಯಾಸಕಿ ಸ್ವಾತಿ ಅಂಕೋಲೆಕರ ನಿರೂಪಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ವಂದಿಸಿದರು.