ಸಾರಾಂಶ
ಗದಗ: ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಜಿಲ್ಲಾ ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಶನಿವಾರ ನಗರದ ಗಾಂಧಿ ವೃತ್ತದಿಂದ ಬೃಹತ್ ಪ್ರತಿಭಟನಾ ಬೈಕ್ ರ್‍ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ರ್‍ಯಾಲಿ ಗಾಂಧಿ ಸರ್ಕಲ್ ನಿಂದ ಪ್ರಾರಂಭವಾಗಿ ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬಸವೇಶ್ವರ ಸರ್ಕಲ್ ಮುಖಾಂತರ ಜೋಡ ಮಾರುತಿ ದೇವಸ್ಥಾನ ಸರ್ಕಲ್ ಮೂಲಕ ಸಾಗಿ ಮುಳಗುಂದ ನಾಕಾ ಸರ್ಕಲ್‌ದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಬೈಕ್ ರ್‍ಯಾಲಿಗೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಕ್ಕಣ್ಣೇಶ್ವರ ಮಠದ ಶ್ರೀಶಂಕರಾನಂದ ಸ್ವಾಮಿಗಳು ಮಾತನಾಡಿ, ಹಿಂದೂಗಳು ಸಣ್ಣ ಸಣ್ಣ ಜಾತಿ ಉಪಜಾತಿ ಲೆಕ್ಕಿಸದೆ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬಂದಾಗ ಇಡೀ ವಿಶ್ವ ಮತ್ತು ಸರ್ಕಾರ ನಮ್ಮತ್ತ ಕಣ್ಣು ತೆರೆಯುತ್ತವೆ. ನಮ್ಮ ಒಗ್ಗಟ್ಟು ನಮ್ಮ ಶಕ್ತಿಯಾಗಬೇಕಾಗಿದೆ. ಇಲ್ಲವಾದಲ್ಲಿ ನಮ್ಮನ್ನು ಹಂತ ಹಂತವಾಗಿ ವಿಭಜಿಸಿ ನಮ್ಮ ಅಸ್ಮಿತೆಗೆ ಧಕ್ಕೆ ತರುವ ಕಾರ್ಯ ನಡೆಯುತ್ತದೆ. ಹಿಂದೂ ಧರ್ಮಕ್ಕೆ ಸನಾತನ ಶಕ್ತಿ ಇದೆ, ಸಹನಶಕ್ತಿ ಇದೆ. ಆಚಾರ ವಿಚಾರ ಸಂಸ್ಕೃತಿ ಉಳಿಸಿಕೊಳ್ಳುವುದು ಅನಿವಾರ್ಯ ಭಾರತ ದೇಶದ ಬೆಂಬಲವಿಲ್ಲದೆ ಬಾಂಗ್ಲಾದೇಶ ಉದಯವಾಗುತ್ತಿರಲಿಲ್ಲ. ಅದೇ ಬಾಂಗ್ಲಾದೇಶ ಇಂದು ಮುಸ್ಲಿಂ ಉಗ್ರವಾದಿಗಳೊಂದಿಗೆ ಕೈಜೋಡಿಸಿ ಹಿಂದೂಗಳ ಮೇಲೆ ಅತ್ಯಾಚಾರ ಅನಾಚಾರ ಧಾರ್ಮಿಕ ಕೇಂದ್ರಗಳ ನಾಶ ಹಿಂದೂ ಸ್ವಾಮಿಗಳ ಬಂಧನ ಮುಖಾಂತರ ಹಿಂದೂ ಧರ್ಮದ ಅಳುವಿಗೆ ಕಾರಣವಾಗುತ್ತಿದ್ದಾರೆ. ಈ ಮನೋಭಾವನೆ ಭಾರತಕ್ಕೆ ಹೊಂದಿಕೊಂಡಿರುವ ಮುಸ್ಲಿಂ ರಾಷ್ಟ್ರಗಳು ಬಿಡದೆ ಹೋದಲ್ಲಿ ಮುನ್ನೊಂದು ದಿನ ಪಶ್ಚಾತಾಪ ಪಡುವ ಕಾಲ ಬರುತ್ತದೆ ಎಂದರು.
ನರಸಾಪೂರ ಅನ್ನದಾನೇಶ್ವರ ಶಾಖಾ ಮಠದ ಡಾ. ವೀರೇಶ್ವರ ಸ್ವಾಮಿಗಳು ಮಾತನಾಡಿ, ಇಡೀ ವಿಶ್ವವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ದುಸ್ಸಾಹಸದಲ್ಲಿ ಹಲವು ಧರ್ಮ ಮುಖಂಡರು ಇತರೆ ಜನಾಂಗಗಳ ಮೇಲೆ ಉಗ್ರವಾದಿಗಳ ಬೆಂಬಲಿಗದೊಂದಿಗೆ ಅವ್ಯಾಹಿತವಾಗಿ ಹಲ್ಲೆ ಮಾಡುತ್ತಿದ್ದಾರೆ. ಜತೆಗೆ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮಹಿಳೆ ಮೇಲೆ ಅತ್ಯಾಚಾರ ಲವ್ ಜಿಹಾದ್ ತಂತ್ರಗಳ ಮೂಲಕ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದಾರೆ. ಈ ದಿಶೆಯಲ್ಲಿ ನಾವು ಜಾಗೃತರಾಗಬೇಕಾಗಿದ್ದು ಹಾಗೂ ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕಾಗಿದ್ದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತದ ನೆರೆಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆತಂಕಕಾರಿಯಾಗಿವೆ. ಒಂದು ಕಡೆ ನೆರೆ ರಾಷ್ಟ್ರದಲ್ಲಿ ಅತ್ಯಾಚಾರ ಅನಾಚಾರ ಮತಾಂತರ ನಡೆದರೆ ದೇಶದಲ್ಲಿ ಲವ್ ಜಿಹಾದ್ ಹಾಗೂ ವಕ್ಫ್ ಹೆಸರಿನಲ್ಲಿ ಭೂ ಕಬಳಿಕೆ. ಸ್ವಾತಂತ್ರ ಪೂರ್ವದಲ್ಲಿದ್ದ ಹಿಂದೂ ಮುಸ್ಲಿಮರ ಜನಸಂಖ್ಯಾ ಸಮತೋಲನ ಗಮನಿಸಿದರೆ ಅತ್ಯಂತ ಸೂಕ್ಷ್ಮವಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳಕಾರಿಯಾದ ವಿಷಯವಾಗಿದೆ. ಹಿಂದೂ ಸಮಾಜ ಎಚ್ಚರಗೊಳ್ಳದೆ ಹೋದರೆ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ತೊಂದರೆಯಾಗುವುದು ಸಹಜ ಎಂದರು.
ರಮೇಶ ಸಜ್ಜಗಾರ, ವಿಶ್ವ ಹಿಂದೂ ಪರಿಷತ್ತಿನ ಶ್ರೀಧರ ಕುಲಕರ್ಣಿ, ಆರ್.ಎಸ್. ಎಸ್ ಸುಧೀರ್ ಘೋರ್ಪಡೆ, ಬಸವರಾಜ ನಾಗಲಾಪೂರ, ನರಸಿಂಹ ಕಾಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡರ ಮಾತನಾಡಿದರು.ಅಭಿನವ ರುದ್ರಮ್ಮತಾಯಿ (ಸಂಭಾಪೂರ), ರವಿ ದಂಡಿನ, ಮಾರುತಿ ಪವಾರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಸಹ ಸಂಯೋಜಕ ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಹುಬ್ಬಳ್ಳಿ, ರಾಘವೇಂದ್ರ ಹಬೀಬ, ಅನಿಲ ಅಬ್ಬಿಗೇರಿ, ಸುಧೀರ ಕಾಟಿಗಾರ, ಅಶ್ವಿನಿ ಜಗತಾಪ, ಲಿಂಗರಾಜ ಪಾಟೀಲ, ಪ್ರೊ. ಇನಾಮದಾರ, ನಾಗವೇಣಿ ಕಟ್ಟಿಮನಿ, ರವಿ ನರೇಗಲ್ಲ, ಚಂದ್ರು ತಡಸದ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಶಂಕರ ಕಾಕಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರವಿ ಹಡಪದ, ರಾಜು ಖಟವಟೆ, ರಾಣಿ ಚಂದಾವರಿ, ದೇವೇಂದ್ರಪ್ಪ ಗೊಟೂರ, ವಿಜಯಲಕ್ಷ್ಮೀ ದಿಂಡೂರ, ನಿರ್ಮಲಾ ಕೊಳ್ಳಿ, ಜಯಶ್ರೀ ಪವಾರ, ವಂದನಾ ವೇರ್ಣೇಕರ ಮುಂತಾದವರು ಇದ್ದರು.