ಕನ್ನಡಿಗರ ಸಾಮಾಜಿಕ ಸ್ಥಿತಿಯ ಉನ್ನತೀಕರಣ ಆಗಲಿ: ಸರ್ವಾಧ್ಯಕ್ಷ ಜೆ.ಎಂ. ಮಠದ

| Published : Feb 12 2024, 01:38 AM IST

ಕನ್ನಡಿಗರ ಸಾಮಾಜಿಕ ಸ್ಥಿತಿಯ ಉನ್ನತೀಕರಣ ಆಗಲಿ: ಸರ್ವಾಧ್ಯಕ್ಷ ಜೆ.ಎಂ. ಮಠದ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಯ ಉನ್ನತೀಕರಣ ಆಗಬೇಕು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಕನ್ನಡಿಗರ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಯ ಉನ್ನತೀಕರಣ ಆಗಬೇಕು ಎಂದು ಸರ್ವಾಧ್ಯಕ್ಷ ಜೆ.ಎಂ. ಮಠದ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ನಿರುದ್ಯೋಗಕ್ಕೆ ಸರ್ಕಾರದ ಹುದ್ದೆಯನ್ನು ಹೊಂದುವುದಷ್ಟೇ ಪರ್ಯಾಯ ಎಂದು ನಂಬಿರುವ ಯುವಶಕ್ತಿಗೆ, ಸರ್ಕಾರಿ ಹುದ್ದೆಗಳಿಗೆ ಪರ್ಯಾಯ ಕೆಲಸಗಳ ಮೂಲಗಳ ಬಗ್ಗೆ ತಿಳಿಸುವ ಮತ್ತು ಸ್ವತಂತ್ರ ಆರ್ಥಿಕ ಶಕ್ತಿಯ ಬಲವರ್ಧನೆಗೆ ಬೇಕಾದ ಅವಕಾಶಗಳ ಇರುವಿಕೆಯನ್ನು ತಲುಪಿಸುವಲ್ಲಿ ಪ್ರಯತ್ನ ಮಾಡಬೇಕಿದೆ. ಪ್ರಯತ್ನ ಮಾಡದೇ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಿಗುವುದಿಲ್ಲ. ಯಶಸ್ಸು ಸಾಧಿಸಲು ನಮ್ಮ ಸಕಾರಾತ್ಮಕ ಪ್ರಯತ್ನಗಳು ಇಲ್ಲದೆ ಇದ್ದರೆ, ಪ್ರಗತಿ ಹೊಂದುವುದು ಅಸಾಧ್ಯ. ಜಿಲ್ಲೆಯಲ್ಲಿನ ಪುರಾತನ ಸ್ಮಾರಕಗಳ ಇರುವಿಕೆಗೆ ವ್ಯಾಪಕವಾದ ನಿರಂತರ ಪ್ರಚಾರದ ಅಗತ್ಯವಿದೆ. ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಮುಕ್ತೇಶ್ವರ ದೇವಾಲಯ, ರಟ್ಟಿಹಳ್ಳಿಯ ಕದಂಬೇಶ್ವರ, ಹಾವೇರಿಯ ಪುರಸಿದ್ಧೇಶ್ವರ ದೇವಾಲಯ, ಹಾನಗಲ್ಲಿನ ಬಿಲ್ಲೇಶ್ವರ ಮತ್ತು ತಾರಕೇಶ್ವರ, ಬಂಕಾಪುರದ ನಗರೇಶ್ವರ, ಬಾಳಂಬೀಡದ ಕಲೇಶ್ವರ, ಗಳಗನಾಥದ ಗಳಗನಾಥೇಶ್ವರ ದೇವಾಲಯ ಮುಂತಾದ ಪ್ರಾಚೀನ ಸ್ಮಾರಕಗಳು ಜನಾಕರ್ಷಣೆಗೆ ಪಾತ್ರವಾಗಿವೆ ಎಂದರು.

ಕಳೆಗಟ್ಟಿದ ಸರ್ವಾಧ್ಯಕ್ಷರ ಮೆರವಣಿಗೆ:

13ನೇ ಜಿಲ್ಲಾ ಕಸಾಪ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರ್ವಾಧ್ಯಕ್ಷ ಜೆ.ಎಂ. ಮಠದ ಅವರ ಮೆರವಣಿಗೆ ಭಾನುವಾರ ನಗರದಲ್ಲಿ ಅದ್ದೂರಿಯಾಗಿ ಜರುಗಿತು.

ಎ.ಬಿ. ರತ್ನಮ್ಮ ಹಾಗೂ ಸಂಗಡಿಗರು ನಾಡದೇವಿಯ ಪೂಜೆ ಸಲ್ಲಿಸಿದರು. ನಂತರ ಸಿದ್ದೇಶ್ವರ ನಗರದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಡಿವೈಎಸ್‌ಪಿ ಗಿರೀಶ ಬೋಜಣ್ಣನವರ ಚಾಲನೆ ನೀಡಿದರು. ಇಲ್ಲಿಂದ ಹೊರಟ ಮೆರವಣಿಗೆಯು ಹಳೇ ಪಿ.ಬಿ.ರಸ್ತೆ, ಕುರಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂಜಿ. ರಸ್ತೆ, ಪೊಸ್ಟ್ ಸರ್ಕಲ್, ಅಶೋಕ ಸರ್ಕಲ್ ಮೂಲಕ ಎಪಿಎಂಸಿ ಆವರಣದಲ್ಲಿರುವ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.

ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ಸಮಾಳ, ಹಲಗೆ, ಆರ್ಕೆಸ್ಟ್ರಾ ಸೇರಿದಂತೆ ವಿವಿಧ ವಾದ್ಯ ಮೇಳಗಳಿದ್ದವು. ಶಾಲಾ ಮಕ್ಕಳು ಕನ್ನಡ ಬಾವುಟ ಹಿಡಿದು ಕನ್ನಡದ ಘೋಷಣೆ ಕೂಗುವ ಮೂಲಕ ಮೆರವಣಿಗೆಗೆ ಮೆರಗು ನೀಡಿದರು.

ಇದಕ್ಕೂ ಮುನ್ನ ಧ್ವಜಾರೋಹಣವನ್ನು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ನೆರವೇರಿಸಿದರು.

ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ವೀರೇಶ ಜಂಬಗಿ, ಚೋಳಪ್ಪ ಕಸವಾಳ, ಮೆರವಣಿಗೆ ಸಮಿತಿ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ರವೀಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಾಪುರ, ಏಕನಾಥ ಭಾನುವಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಶಿವಕುಮಾರ ಜಾದವ, ಕಿರಣ ಗುಳೇದ, ಹನುಮಂತಪ್ಪ ಕಬ್ಬಾರ, ಮಂಜುನಾಥ ದುಗ್ಗತ್ತಿ, ಶ್ರೀನಿವಾಸ ಏಕಬೋಟೆ, ಬಿಇಒ ಎಂ.ಎಚ್. ಪಾಟೀಲ, ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಮೆರವಣಿಗೆಯಲ್ಲಿದ್ದರು.