ಉಪ್ಪಾರರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಲಿ

| Published : Jul 23 2024, 12:42 AM IST

ಸಾರಾಂಶ

ಕರ್ನಾಟಕದಲ್ಲಿ ಉಪ್ಪಾರರು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ.

ಹೊಸಪೇಟೆ: ಉಪ್ಪಾರ ಸಮುದಾಯದ ನೌಕರರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ರಾಜ್ಯ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎನ್.ಎಸ್. ಚಂದ್ರಪ್ಪ ಹೇಳಿದರು.

ನಗರದ ಯಾತ್ರಿ ನಿವಾಸದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಉಪ್ಪಾರರ ನೌಕರರ ಸಂಘದ ವತಿಯಿಂದ ಜರುಗಿದ ವಿಜಯನಗರ ಜಿಲ್ಲಾ ಉಪ್ಪಾರ ನೌಕರರ ಸಂಘಟನಾ ಸಭೆಯಲ್ಲಿ ಮಾತನಾಡಿದರು.ಕರ್ನಾಟಕದಲ್ಲಿ ಉಪ್ಪಾರರು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ನಮ್ಮ ಸಮುದಾಯದ ಅಭಿವೃದ್ಧಿಗೆ ನಾವೆಲ್ಲಾ ಕಟಿಬದ್ಧರಾಗಬೇಕಾಗಿದೆ. ಸಮಾಜದ ಪ್ರತಿಭಾವಂತ ಯುವಕ, ಯುವತಿಯರ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ಸಮಾಜದ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಅಭಿವೃದ್ಧಿಗೆ ಸಂಘಟನೆ ಗಟ್ಟಿಗೊಳಿಸಬೇಕಾಗಿದೆ. ಸಮುದಾಯದಲ್ಲಿ ಯಾರಿಗೇ ಅನ್ಯಾಯ ಶೋಷಣೆಯಾದರೆ ನಾವೆಂದಿಗೂ ಸಹಿಸುವುದಿಲ್ಲ, ಒಗ್ಗಟ್ಟಾಗಿ ಹೋರಾಡೋಣ ಎಂದರು.

ಹೊಸಪೇಟೆ ತಾಲೂಕು ಉಪ್ಪಾರರ ಭಗೀರಥ ಸಂಘದ ಅಧ್ಯಕ್ಷ ಯು.ಆಂಜನೇಯಲು ಮಾತನಾಡಿ, ಸಂಘಟಿತರಾಗದೇ ಯಾವ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ವೈಯಕ್ತಿಕ ಸಮಸ್ಯೆಗಳೇನೇ ಇರಲಿ ಸಮಾಜದ ಸಮಸ್ಯೆಗಳಿಗೆ ನಾವೆಲ್ಲರೂ ಒಗ್ಗೂಡಬೇಕಾಗಿದೆ. ರಾಜಕೀಯವಾಗಿ ಉಪ್ಪಾರ ಸಮುದಾಯದ ಅಸ್ತಿತ್ವವನ್ನು ಬಲಗೊಳಿಸಬೇಕಾದರೆ ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ್ಪಾರ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಮಂಜುನಾಥಸ್ವಾಮಿ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕಾಗಿದೆ. ತಾಲೂಕು ಜಿಲ್ಲಾ ಹಂತಗಳಲ್ಲಿ ಸಮುದಾಯ ಭವನ, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಉನ್ನತ ಶಿಕ್ಷಣ ಹಾಗೂ ವಿವಿಧ ಸರ್ಕಾರಿ ಹುದ್ದೆಗಳಿಗೆ ನಮ್ಮ‌ಸಮುದಾಯದ ಯುವಕ, ಯುವತಿಯರಿಗೆ ಸೂಕ್ತ ತರಬೇತಿ ನೀಡಬೇಕಾಗಿದೆ. ಇದಕ್ಕೆಲ್ಲಾ ಸಂಘಟನೆ ಅನಿವಾರ್ಯ ಎಲ್ಲರೂ ಸಂಘಕ್ಕೆ ಶುಲ್ಕ-ದೇಣಿಗೆ ಭರಿಸಿ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ರಾಜ್ಯ ಉಪ್ಪಾರ ನೌಕರರ ಸಂಘದ ಖಜಾಂಚಿ ಷಣ್ಮುಖ, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ, ಹರಪನಹಳ್ಳಿ ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ ಮಾತನಾಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಮಂಜುನಾಥ, ಅಂಜಿನಪ್ಪ, ಲೋಕೇಶ್‌ ಸೇರಿದಂತೆ ಮತ್ತಿತರರು ಸೂಕ್ತ ಸಲಹೆಗಳನ್ನು ನೀಡಿದರು. ಶಿಕ್ಷಕ ಪರಶುರಾಮ, ಉಪನ್ಯಾಸಕ ಸೋಮೇಶ್ ಉಪ್ಪಾರ ನಿರ್ವಹಿಸಿದರು.