ವೀರಶೈವ ಲಿಂಗಾಯತರು ಇನ್ನಾದರೂ ಒಗ್ಗಟ್ಟು ಪ್ರದರ್ಶಿಸಲಿ

| Published : Apr 21 2025, 12:46 AM IST

ವೀರಶೈವ ಲಿಂಗಾಯತರು ಇನ್ನಾದರೂ ಒಗ್ಗಟ್ಟು ಪ್ರದರ್ಶಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಲಿಂಗಾಯತರು ಇನ್ನಾದರೂ ಜಾಗೃತರಾಗಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು. ಜಾತಿಗಣತಿಯವರು ನಿಮ್ಮ ಮನೆಗಳ ಬಾಗಿಲಿಗೆ ಬಂದಾಗ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ, ಉಪ ಜಾತಿ ಕಾಲಂನಲ್ಲಿ ನಿಮ್ಮ ಉಪ ಜಾತಿ ಯಾವುದು ಎಂಬುದನ್ನು ಪ್ರಮುಖವಾಗಿ ಬರೆಸುವುದನ್ನು ಮರೆಯಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನವಿ । ಶ್ರೀ ಮಹಾಗಣಪತಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ರಜತ ಮಹೋತ್ಸವ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತರು ಇನ್ನಾದರೂ ಜಾಗೃತರಾಗಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು. ಜಾತಿಗಣತಿಯವರು ನಿಮ್ಮ ಮನೆಗಳ ಬಾಗಿಲಿಗೆ ಬಂದಾಗ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ, ಉಪ ಜಾತಿ ಕಾಲಂನಲ್ಲಿ ನಿಮ್ಮ ಉಪ ಜಾತಿ ಯಾವುದು ಎಂಬುದನ್ನು ಪ್ರಮುಖವಾಗಿ ಬರೆಸುವುದನ್ನು ಮರೆಯಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಶಾಬನೂರು ರಸ್ತೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ 25ನೇ ವರ್ಷದ ಹಿನ್ನೆಲೆ ರಜತ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಧರ್ಮ ಜಾಗೃತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ವೀರಶೈವ ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಮುನ್ನೆಡೆದಾಗ ಮಾತ್ರವೇ ಭವಿಷ್ಯದಲ್ಲಿ ಸಮಾಜ, ಸಮಾಜದ ಮುಂದಿನ ಪೀಳಿಗೆ ಭವಿಷ್ಯ ಉಜ್ವಲವಾಗಲು, ಅಭಿವೃದ್ಧಿ ಹೊಂದಲು ಸಾಧ್ಯ. ಜನಗಣತಿ, ಜಾತಿಗಣತಿ ಹೀಗೆ ಯಾವುದೇ ಗಣತಿಗೆ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಸಮರ್ಪಕ ಮಾಹಿತಿ ನೀಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹೆತ್ತ ತಂದೆ, ತಾಯಿಯ ಋಣ ಮತ್ತು ಶ್ರೀ ಗುರುವಿನ ಋಣವನ್ನು ಎಷ್ಟು ತೀರಿಸಿದರೂ ಸಾಲದು. ವೀರಶೈವ ಧರ್ಮ ಸಂವಿಧಾನದಲ್ಲಿ ಮಾನವ ಜೀವನದ ಆದರ್ಶ ಮೌಲ್ಯಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ, ಉದ್ಧರಿಸಿದ್ದಾರೆ. ದಾವಣಗೆರೆ ನಗರದ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪನೆಯಾಗಿ 25 ವರ್ಷ ಪೂರ್ಣವಾಗಿದೆ. ಆದ್ದರಿಂದ ರಜತ ಮಹೋತ್ಸವ ಏರ್ಪಡಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ದಾ-ಹ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ ಮಾತನಾಡಿ, ಸಮಾಜದಲ್ಲಿ ಸಂಘಟನೆಗಳು ನಡೆಯಬೇಕೆ ಹೊರತು, ಸಂಘರ್ಷಗಳಲ್ಲ. ವ್ಯಕ್ತಿಯ ಹಿತಕ್ಕಿಂತಲೂ ಸಾಮಾಜಿಕ ಹಿತ ದೊಡ್ಡದು. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿ ಆಗಬೇಕು, ಮಾರಕವಾಗಬಾರದು. ಶ್ರೀ ವೀರಭದ್ರಸ್ವಾಮಿ ಲೀಲಾ ಪವಾಡಗಳು ಅನಂತ. ನಂಬಿದವರ ಬಾಳಿನಲ್ಲಿ ಬೆಳಕು ಮೂಡಿಸುವ ಮಹಾದೈವವಾಗಿದೆ ಎಂದು ಹೇಳಿದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಸ್ವಾಮೀಜಿ, ಹರಿಹರ ಕಾಲಜ್ಞಾನ ಮಠದ ಸಿದ್ಧಲಿಂಗ ಸ್ವಾಮಿಗಳು, ಉಳವಯ್ಯ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ದೇವಸ್ಥಾನದ ಪ್ರಧಾನ ಅರ್ಚಕ ಎಂ.ಆರ್. ವೀರಯ್ಯ ಸ್ವಾಮಿ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಇತರರು ಇದ್ದರು.

ಇದೇ ವೇಳೆ 8 ಜನ ವೀರ ಮಾಹೇಶ್ವರ ವಟುಗಳಿಗೆ ಶಿವದೀಕ್ಷೆ, ಒಂದು ಜೋಡಿ ಸಾಮೂಹಿಕ ವಿವಾಹ ಜರುಗಿತು. ಸಮಾರಂಭಕ್ಕೂ ಮುನ್ನ ಗುಗ್ಗಳ ಕಾರ್ಯ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

- - -

(ಕೋಟ್‌) ಸರ್ವ ಶುಭ ಕಾರ್ಯಗಳಿಗೂ ಮೊದಲು ಪೂಜೆಗೊಳ್ಳುವ ಶ್ರೀ ಮಹಾಗಣಪತಿ, ದುಷ್ಟರ ದುರಂಹಕಾರ ನಾಶಗೊಳಿಸಿ, ಶಿವ ಸಂಸ್ಕೃತಿಯನ್ನು ಉಳಿಸಿದ ಕೀರ್ತಿಯು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಸಲ್ಲುತ್ತದೆ. ಅಂತಹ ಶ್ರೀ ವೀರಭದ್ರ ಸ್ವಾಮಿ ರಂಭಾಪುರಿ ಪೀಠದ ಶ್ರೀಕ್ಷೇತ್ರನಾಥನಾಗಿ ಮತ್ತು ಗೋತ್ರ ಪುರುಷನಾಗಿ ಎಲ್ಲೆಡೆ ಪೂಜೆಗೊಳ್ಳುತ್ತಿದ್ದಾನೆ. ಬದುಕಿನಲ್ಲಿ ಆತ್ಮಬಲ, ಆತ್ಮ ಸ್ಥೈರ್ಯ ತುಂಬುವ ಉಭಯ ದೈವಗಳ ಸ್ಮರಣೆ, ಪೂಜೆ ಅವಶ್ಯಕ.

- ರಂಭಾಪುರಿ ಶ್ರೀ, ಬಾಳೆಹೊನ್ನೂರು

- - - -20ಕೆಡಿವಿಜಿ4.ಜೆಪಿಜಿ:

ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀ ಮತ್ತಿತರ ಗಣ್ಯರು ಮಾತನಾಡಿದರು.