ಸಾರಾಂಶ
ಸಚಿವ ಶಿವಾನಂದ ಪಾಟೀಲ ಸೂಚನೆ, ತಹಸೀಲ್ದಾರಗಳು ಕತ್ತೆ ಕಾಯ್ತಾ ಇದ್ದೀರಾ ಎಂದು ತರಾಟೆಗೆ ಕನ್ನಡಪ್ರಭ ವಾರ್ತೆ ಹಾವೇರಿ
ಕುಡಿಯುವ ನೀರಿಗಾಗಿ ನದಿಗೆ ಹರಿಸಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಕೆಯಾಗಬೇಕು. ನದಿಗೆ ಬಿಟ್ಟ ನೀರನ್ನು ಉಳಿಸಿಕೊಳ್ಳಬೇಕು. ನದಿ ನೀರಿನ ನಿರ್ವಹಣೆ ಆಯಾ ತಹಸೀಲ್ದಾರ್, ಡಿವೈಎಸ್ಪಿಗಳ ಹೊಣೆಗಾರಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಜಲಜೀವನ್ ಮಿಷನ್ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಭದ್ರಾಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಿಸಲಾಗಿದೆ. ಈ ನೀರನ್ನು ಕೃಷಿಗೆ ಬಳಕೆ ಮಾಡದಂತೆ ಈಗಾಗಲೇ ರಾಜ್ಯಾದ್ಯಂತ ನಿಷೇಧ ಮಾಡಲಾಗಿದೆ. ಆದರೆ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಮೋಟರ್ ಹಚ್ಚಿ ನೀರು ಎತ್ತುವ ದೂರುಗಳು ಬಂದಿವೆ. ನಿಷೇಧವಿದ್ದರೂ ಇದನ್ನು ತಡೆಯದ ತಹಸೀಲ್ದಾರಗಳು ಕತ್ತೆ ಕಾಯ್ತಾ ಇದ್ದೀರಾ?. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣ ವಿಶೇಷ ಪ್ರಯತ್ನದಿಂದ ನಾವು ಭದ್ರಾ ಜಲಾಶಯದಿಂದ ನೀರು ತಂದಿದ್ದೇವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಗ್ಯತೆ ಇಲ್ಲಾ ಎಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಹೇಗೆ ಕೆಲಸ ಮಾಡುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಅಸಮಾಧಾನ:ಹೆಗ್ಗೇರಿ ಕೆರೆ ನೀರನ್ನು ಪಂಪ್‌ಮಾಡಲು ಹಲವು ಕಾರಣ ಹೇಳಿದ ಅಧಿಕಾರಿಗಳ ಮೇಲೆ ತೀವ್ರ ಹರಿಹಾಯ್ದರು. ಅಕ್ಕಮಹಾದೇವಿ ಕೆರೆ, ದುಂಡಿಬಸವೇಶ್ವರ ಕೆರೆ, ಮುಲ್ಲಾನ ಕೆರೆ ಹಾಗೂ ಹೆಗ್ಗೇರಿ ಕೆರೆ ನೀರು ಹಾಗೂ ತುಂಗಭದ್ರಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹಾವೇರಿ ನಗರಕ್ಕೆ ಸಮರ್ಪಕ ನೀರು ಪೂರೈಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೆಗ್ಗೇರಿ ಕೆರೆ ನೀರನ್ನು ನಗರ ಕುಡಿಯುವ ನೀರಿಗೆ ಬಳಕೆ ಮಾಡುವ ಕುರಿತಂತೆ ಪೈಪ್‌ಲೈನ್ ಹಾಗೂ ಅಗತ್ಯವಾದ ಮೋಟರ್, ಟಿಸಿಯನ್ನು ತಕ್ಷಣವೇ ಅಳವಡಿಸಲು ಕ್ರಮಕೈಗೊಳ್ಳಬೇಕು. ದುರಸ್ತಿಗೆ ತಡವಾದರೆ ಟಿಸಿ ಹಾಗೂ ಮೋಟರ್‌ನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರೆತ್ತಲು ಕ್ರಮವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರಕ್ಕೆ ನೀರು ಪೂರೈಸುವ ₹೧೦ ಕೋಟಿ ವೆಚ್ಚದ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ದುರಸ್ತಿ ಮಾಡಿಸಿದ ಪಂಪ್ 3 ವರ್ಷಗಳಲ್ಲಿ ಹಾಳಾಗಿವೆ ಎಂದು ಹೇಳುತ್ತೀರಿ. ಈ ಕುರಿತಂತೆ ಒಂದು ತಿಂಗಳೊಳಗಾಗಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ ಅವರು, ಮಳೆಗಾಲದ ಸಂದರ್ಭದಲ್ಲಿ ಹೆಗ್ಗೇರಿ ಕೆರೆ ತುಂಬಿಸಲು ಆದ್ಯತೆ ನೀಡದ ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರರನ್ನು ತರಾಟೆಗೆ ತೆದುಕೊಂಡರು.
ಕತ್ತೆ ಕಾಯ್ತಾ ಇದ್ದೀರಾ?ಮುಲ್ಲಾನ ಕೆರೆಗೆ ಗಟಾರದ ನೀರು ಹರಿಯುತ್ತಿರುವ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ, ದುಂಡಿಬಸವೇಶ್ವರ ಕೆರೆ ದಂಡೆಯ ಮೇಲೆ ಅಕ್ರಮ ಮನೆಗಳ ನಿರ್ಮಾಣ ಮಾಡಿದ್ದರೂ ತಡೆದಿಲ್ಲ. ಮುಲ್ಲಾನ ಕೆರೆಗೆ ಗಟಾರದ ನೀರು ಹರಿಯುತ್ತಿದ್ದರೂ ತಡೆದಿಲ್ಲ. ಇದನ್ನೂ ನೋಡಿಯೂ ಪೌರಾಯುಕ್ತರು, ನಗರಸಭೆ ಅಭಿಯಂತರರು ಸುಮ್ಮನಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ? ಏನು ಕತ್ತೆ ಕಾಯ್ತಾ ಇದ್ದೀರಾ? ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಸಭೆಯಲ್ಲಿ ಉಪಸ್ಥಿತರಿದ್ದ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗೆ ಸಂಜೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಲ್ಲಾನ ಕೆರೆಗೆ ಕೊಳಚೆ ನೀರು ಹರಿಯುವುದನ್ನು ತಡೆಯಬೇಕು. ಈ ಕುರಿತಂತೆ ಸಮಗ್ರ ವರದಿಯನ್ನು ನೀಡಬೇಕು. ಪೌರಾಯುಕ್ತರ ಮೇಲೆ ರಿಪೋರ್ಟ್ ನೀಡಬೇಕು. ಇಲ್ಲವಾದರೆ ನಿಮ್ಮನ್ನೇ ಅಮಾನತು ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕು. ಬಾಡಿಗೆ ಆಧಾರದ ಮೇಲೆ ಖಾಸಗಿ ಕೊಳವೆಬಾವಿಗಳ ಪಡೆದು ಪೈಪ್‌ಲೈನ್ ಅಳವಡಿಸಿ ನೀರು ಪಡೆಯಬೇಕು. ಖಾಸಗಿ ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ಕೊಡಲು ಹಿಂದೇಟುಹಾಕಿದರೆ ನಿಯಮಾನುಸಾರ ಕ್ರಮಕೈಗೊಂಡು ಖಾಸಗಿ ಕೊಳವೆಬಾವಿಗಳನ್ನು ಪಡೆದು ನೀರು ಪೂರೈಸಬೇಕು. ಟ್ಯಾಂಕರ್ ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದು ಸೂಚಿಸಿದರು.ಮೇವು ಬ್ಯಾಂಕ್:
ಜಾನುವಾರುಗಳ ಮೇವಿಗಾಗಿ ಸರ್ಕಾರ ₹ಐದು ಲಕ್ಷ ಬಿಡುಗಡೆ ಮಾಡಿದೆ. ಬರ ನಿರ್ವಹಣೆಗಾಗಿ ಪ್ರತಿ ಶಾಸಕರಿಗೆ ₹೫೦ ಲಕ್ಷ ಬಿಡುಗಡೆ ಮಾಡಲಾಗಿದೆ. ತಾಲೂಕಿನಲ್ಲಿ ಗೋಶಾಲೆ ಆರಂಭಿಸುವ ಬೇಡಿಕೆ ಬಂದರೆ ತಕ್ಷಣ ಕ್ರಮಕೈಗೊಳ್ಳಬೇಕು. ಈಗಾಗಲೇ ೧೦ ಸಾವಿರ ಮೇವಿನ ಬೀಜದ ಕಿಟ್‌ನ್ನು ರೈತರಿಗೆ ವಿತರಿಸಲಾಗಿದೆ. ಈ ಕುರಿತಂತೆ ಸರ್ವೇ ಮಾಡಿ ಬಳಕೆ ಕುರಿತಂತೆ ತಹಸೀಲ್ದಾರಗಳಿಂದ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದರು.ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಶಾಸಕ ಯು.ಬಿ. ಬಣಕಾರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಿ, ಸಹಾಯವಾಣಿ ಸ್ಥಾಪನೆ ಕಾಟಾಚಾರದ ಕೆಲಸವಾಗಬಾರದು. ಸಮಸ್ಯೆಗಳ ದೂರು ಸ್ವೀಕರಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು.ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.