ಕನ್ನಡಪ್ರಭ ವಾರ್ತೆ ಬೆಳಗಾವಿ

ಒಂದು ಉತ್ತಮ ಸಮಾಜದಲ್ಲಿ ಜನಸಾಮಾನ್ಯರಿಗೆ ಯಾವುದು ಮುಖ್ಯ ಮತ್ತು ಪ್ರಸ್ತುತವೆಂದು ಅನಿಸುತ್ತದೆಯೋ, ಸರ್ಕಾರವು ಸಹ ಅದನ್ನೇ ಆದ್ಯತೆಯಾಗಿ ಪರಿಗಣಿಸಬೇಕು. ಜನರು ತಮ್ಮ ಹೊಸ ಆಲೋಚನೆಗಳನ್ನು ಮತ್ತು ಅಭಿಪ್ರಾಯಗಳನ್ನು ಯಾವುದೇ ಭಯವಿಲ್ಲದೆ ವ್ಯಕ್ತಪಡಿಸುವಷ್ಟು ಧೈರ್ಯವಂತರಾಗಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಲೇಖಕಿ ಡಾ.ಪಿ.ಶಿವಗಾಮಿ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಮತ್ತು ಇಂಗ್ಲಿಷ್ ಅಧ್ಯಯನ ವಿಭಾಗ, ಕುವೆಂಪು ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್‌ವಾದಿ ಸ್ತ್ರೀವಾದ: ಒಂದು ಬೋಧನಾ ಸಿದ್ಧಾಂತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪ್ರಸ್ತುತ ಸಮಯದಲ್ಲಿ ರಾಜಕೀಯದ ಆಗು ಹೋಗುಗಳು ಜನರ ಸಾಮಾಜಿಕ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿಯುವುದು ಹಾಗೂ ದೌರ್ಜನ್ಯ, ತುಳಿತ ಮತ್ತು ಇತರ ಸಾಮಾಜಿಕ ಪಿಡುಗುಗಳನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಸಾಧ್ಯ ಎಂದು ಹೇಳಿದರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಸಂದರ್ಶಕ ಪ್ರಾಧ್ಯಾಪಕ ಡಾ.ಎಸ್.ಲೂರ್ದನಾಥನ್ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಮತ್ತು ಅನ್ಯಾಯದ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಬೇಕು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಒಡೆದ ಕೊಂಡಿಗಳನ್ನು ಮತ್ತೆ ಬೆಸೆಯಬೇಕಾದ ಅಗತ್ಯವಿದೆ. ನಮ್ಮ ಸಂಸ್ಕೃತಿಯು ಕೇವಲ ಆಚರಣೆಗಳನ್ನು ಪುನರಾವರ್ತಿಸುವುದರಿಂದ ಸಾಂಸ್ಕೃತಿಕ ಎನಿಸಿಕೊಳ್ಳುವುದಿಲ್ಲ, ಬದಲಾಗಿ ಮೌಲ್ಯಗಳನ್ನು ಮರುಸ್ಥಾಪಿಸುವ ಮೂಲಕ ಅದು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಅಧಿಕಾರಿ ಎಂ.ಎ.ಸಪ್ನ ಮಾತನಾಡಿ , ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಜೀವನದ ಎಲ್ಲಾ ಹಂತಗಳಿಗೂ ಅನ್ವಯಿಸುತ್ತವೆ ಮತ್ತು ಸಮಾಜ ಇವುಗಳನ್ನು ಸಾರ್ವತ್ರಿಕವಾಗಿ ಸ್ವೀಕರಿಸುತ್ತದೆ. ಈ ಆಲೋಚನೆಗಳು ಕಾಲ ಸರಿದಂತೆ ಹೊಸ ರೂಪ ಪಡೆದುಕೊಳ್ಳುತ್ತಾ ವಿಕಸನಗೊಳ್ಳುತ್ತವೆಯೇ ಹೊರತು, ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ವಿಜಯ ನಾಗನ್ನವರ, ಸಂಘಟನಾ ಕಾರ್ಯದರ್ಶಿ ಡಾ.ಮಧುಶ್ರೀ ಕಳ್ಳಿಮನಿ, ಡಾ.ಅಶ್ವಿನಿ ಜಾಮೂನಿ, ಡಾ.ಮಹೇಶ್ ಕುಮಾರ, ಡಾ.ನಾಗರತ್ನ ಪರಾಂಡೆ, ಡಾ.ಕವಿತಾ ಕುಸುಗಲ್, ಡಾ.ಪೂಜಾ ಹಳಿಯಾಳ, ಡಾ.ಫಯಾಜ್ ಅಹ್ಮದ್ ಇಳ್ಕಲ್ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅಂಬೇಡ್ಕರ್‌ ಅಭಿಮಾನಿಗಳು ಭಾಗವಹಿಸಿದ್ದರು.